ರಾಷ್ಟ್ರೀಯ

ಅಮೃತಸರ ರೈಲು ದುರಂತ: ರೈಲ್ವೆ ಚಾಲಕ ಹೇಳಿದ್ದೇನು?

Pinterest LinkedIn Tumblr


ಅಮೃತಸರ್​: ಪಂಜಾಬಿನ ಅಮೃತಸರದಲ್ಲಿ ನಡೆದ ಭೀಕರ ರೈಲು ಅವಘಡ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಘಟನೆ ಸಂಬಂಧ ರೈಲಿನ ಚಾಲಕ (ಲೋಕೋ ಪೈಲೆಟ್) ಅರವಿಂದ್ ಕುಮಾರ್​ ಹೀಗೆ ಸ್ಪಷ್ಟನೆ ನೀಡಿದ್ದಾರೆ.

“ಮೊದಲಿಗೆ ಹಸಿರು ನಿಶಾನೆ ತೋರಿ, ಮುಂದಿನ ಪ್ರಕ್ರಿಯೆಗೆ ಸೂಚನೆ ನೀಡಿದೆ. ನಾನು ಜೋರಾ ಪಾಟಕ್​ ಬಳಿ ಎರಡು ಹಳದಿ ದೀಪಗಳನ್ನು ನೋಡಿ, ವೇಗವನ್ನು ತಗ್ಗಿಸಿದೆ. ಅದೇ ವೇಳೆಗೆ ರೈಲು ಹಳಿ ಮೇಲೆ ಜನರು ಗುಂಪುಗೂಡಿ ನಿಂತಿರುವುದನ್ನು ಗಮನಿಸಿದೆ. ತಕ್ಷಣವೇ ಎಮರ್ಜೆನ್ಸಿ ಬ್ರೇಕ್​ ಹಾಕಿ, ಹಾರ್ನ್​ ಸೌಂಡ್​ ಮಾಡಿದೆ. ರೈಲಿನ ವೇಗ ಕಡಿಮೆಯಾಯಿತಾದರೂ ಸಂಪೂರ್ಣವಾಗಿ ನಿಲ್ಲದೇ, ರೈಲು ಜನರ ಮೇಲೆ ಹರಿಯಿತು. ಒಂದು ವೇಳೆ ನಾನು ಆ ವೇಳೆ ರೈಲನ್ನು ಅಲ್ಲಿಯೇ ನಿಲ್ಲಿಸಿಬಿಟ್ಟಿದ್ದರೇ, ಅಲ್ಲಿ ನೆರೆದಿದ್ದ ಸಾವಿರಾರು ಜನರು ಕಲ್ಲು ಹೊಡೆಯಲು ಆರಂಭಿಸುತ್ತಿದ್ದರು. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲನ್ನು ಅಲ್ಲಿ ನಿಲ್ಲಿಸದೆ, ಅಮೃತಸರ ರೈಲು ನಿಲ್ದಾಣಕ್ಕೆ ತಂದು, ಮೇಲಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದೆ,”

ಅಮೃತಸರದಲ್ಲಿ ವಿಜಯದಶಮಿ ದಿನದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾವಿರಾರು ಜನರ ಕೇಕೆ, ಉದ್ಘಾರದೊಂದಿಗೆ ರಾವಣ ದಹನ ನಡೆಯುತ್ತಿತ್ತು. ಈ ವೇಳೆ ನೂರಾರು ಜನರು ರೈಲು ಹಳಿಯ ಮೇಲೆ ನಿಂತು, ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಸ್ಥಳದಲ್ಲಿನ ಭಾರೀ ಶಬ್ದದಿಂದಾಗಿ ಹಳಿ ಮೇಲೆ ರೈಲು ಬರುತ್ತಿರುವುದು ಜನರ ಗಮನಕ್ಕೆ ಬಂದಿಲ್ಲ. ಏಕಾಏಕಿ ಬಂದ ರೈಲು ಹಳಿ ಮೇಲೆ ನಿಂತಿದ್ದವರ ಮೇಲೆಯೇ ಹರಿದು ಮುಂದೆ ಹೋಯಿತು. ಈ ಧಾರುಣ ಘಟನೆಯಲ್ಲಿ 62 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಘಟನೆ ಕುರಿತು ಈಗಾಗಲೇ ತನಿಖೆಗೆ ಆದೇಶಿಸಿದ್ದು, ಇನ್ನು ನಾಲ್ಕು ವಾರಗಳಲ್ಲಿ ವರದಿ ಬರಲಿದೆ. ತನಿಖೆ ಮೂಲಕ ಯಾರನ್ನು ಆರೋಪಿಸಬೇಕು ಎಂಬುದು ಗೊತ್ತಾಗಲಿದೆ. ಅಲ್ಲಿಯವರೆಗೆ ನಾವು ಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ಹೇಳಿಕೆ ನೀಡಿದ್ದರು.

Comments are closed.