ರಾಷ್ಟ್ರೀಯ

ತೀವ್ರಗೊಂಡ ಪ್ರತಿಭಟನೆ; ಶಬರಿಮಲೆಯತ್ತ ಹೋದ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆಯನ್ನು ಬಲವಂತವಾಗಿ ಕೆಳಗಟ್ಟಿದ ಪ್ರತಿಭಟನಾಕಾರರು

Pinterest LinkedIn Tumblr

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯ ಪ್ರವೇಶ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಅಯ್ಯಪ್ಪ ದೇಗುಲದತ್ತ ಸಾಗಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆಯನ್ನು ಪ್ರತಿಭಟನಾಕಾರರು ಬಲವಂತವಾಗಿ ಕೆಳಗಟ್ಟಿದ ಘಟನೆ ನಡೆದಿದೆ.

ನ್ಯೂಯಾರ್ಕ್ ಟೈಮ್ಸ್ ನ ಭಾರತದ ಪ್ರತಿನಿಧಿ ಸುಹಾಸಿನಿ ರಾಜ್ ಎಂಬುವವರನ್ನು ಪ್ರತಿಭಟನಾಕಾರರು ಕೆಳಗಟ್ಟಿದ್ದಾರೆ. ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವರದಿಗಾಗಿ ಆಕೆ ಶಬರಿಮಲೆಯತ್ತ ಸಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಮಾರ್ಗ ಮಧ್ಯೆ ಅಂದರೆ ಪಂಪಾ ನದಿಯ ಬಳಿ ಅವರನ್ನು ತಡೆದ ಪ್ರತಿಭಟನಾಕಾರರು ಅವರನ್ನು ಬಲವಂತವಾಗಿ ಕೆಳಗೆ ಕಳುಹಿಸಿದ್ದಾರೆ.

ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು ಪತ್ರಕರ್ತೆ ಸುಹಾಸಿನಿರಾಜ್ ಕೆಳಗೆ ಇಳಿದಿದ್ದು, ಇದೀಗ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.

ಇನ್ನು ನಿಳಕ್ಕಲ್ ಬಳಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ತೆರಳಿರಲಿಲ್ಲ. ಕೇವಲ ವರದಿಗಾಗಿ ಅಲ್ಲಿಗೆ ತೆರಳಿದ್ದೆ. ಆದರೆ ಉದ್ರಿಕ್ತರು ನನ್ನ ಮೇಲೆ ಕಲ್ಲು ತೂರಾಟ ಮಾಡಿದರು ಎಂದು ಹೇಳಿದ್ದಾರೆ.

Comments are closed.