ರಾಷ್ಟ್ರೀಯ

ಪೊಲೀಸ್ ರಕ್ಷಣೆಯಲ್ಲಿ ಶಬರಿಮಲೆಗೆ ತೆರಳಿದ್ದ ಆಂಧ್ರ ಮೂಲದ ಮಹಿಳೆಯ ವಾಪಸ್ ಕಳುಹಿಸಿದ ಪ್ರತಿಭಟನಾಕಾರರು!

Pinterest LinkedIn Tumblr

ತಿರುವನಂತಪುರ: ಸಮಯ ಕಳೆದಂತೆ ಶಬರಿಮಲೆ ವಿವಾದ ಗಂಭೀರವಾಗುತ್ತಿದ್ದು, ಇದೀಗ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದ ಮಹಿಳೆಯೊರ್ವರನ್ನು ಪ್ರತಿಭಟನಾಕಾರರು ಮಾರ್ಗ ಮಧ್ಯೆ ತಡೆದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ಕೇರಳ ಪೊಲೀಸರ ಸರ್ಪಗಾವಲಿನ ನಡುವೆಯೇ ಆಂಧ್ರ ಪ್ರದೇಶ ಮೂಲದ 40 ವರ್ಷದ ಮಾಧವಿ ಎಂಬ ಮಹಿಳೆ ಮತ್ತು ಅವರ ಕುಟುಂಬ ಶಬರಿಮಲೆ ಯಾತ್ರೆ ಕೈಗೊಂಡಿತ್ತು. ನಿಳಕ್ಕಲ್ ನಲ್ಲಿ ನಡೆದ ಹಿಂದೂಪರ ಸಂಘಟನೆಗಳ ತೀವ್ರ ಪ್ರತಿಭಟನೆ ಹೊರತಾಗಿಯೂ ಮಾಧವಿ ಪೊಲೀಸರ ನೆರವಿನಿಂದ ಶಬರಿಮಲೆ ಗುಡ್ಡ ಹತ್ತಲು ಆರಂಭಿಸಿದ್ದರು. ಆದರೆ ಮಾರ್ಗಮಧ್ಯೆಯೇ ಪ್ರತಿಭಟನಾಕಾರರು ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ.

ನಿಳಕ್ಕಲ್ ಮತ್ತು ಪಂಪೆಯವರೆಗೂ ಮಾಧವಿ ಸುರಕ್ಷಿತವಾಗಿ ಸಾಗಿದ್ದರು. ಆದರೆ ಪಂಪಾ ಬಳಿ ಅವರನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರು ಅವರನ್ನು ಒತ್ತಾಯ ಪೂರ್ವಕವಾಗಿ ಕೆಳಗೆ ಕಳುಹಿಸಿದ್ದಾರೆ. ಪೊಲೀಸರು ಜೊತೆಯಲ್ಲೇ ಇದ್ದುದರಿಂದ ಮಾಧವಿ ತಾವು ಸುರಕ್ಷಿತವಾಗಿ ದೇಗುಲ ಪ್ರವೇಶ ಮಾಡಬಹುದು ಎಂದು ಭಾವಿಸಿದ್ದರಾದರೂ, ಪಂಪಾ ಬಳಿ ಪ್ರತಿಭಟನಾಕಾರರ ಭಾರಿ ದಂಡೊಂದು ಅವರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದೆ. ಅನ್ಯಮಾರ್ಗವಿಲ್ಲದೇ ಮಾಧವಿ ಅವರು ಶಬರಿಮಲೆ ಗುಡ್ಡದಿಂದ ಕೆಳಗೆ ಇಳಿದಿದ್ದಾರೆ.

ಇನ್ನು ಕಳೆದ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಮುಕ್ತವಾಗಿಸಿತ್ತು. ಇಂದು ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯುತ್ತಿದ್ದು, ಇದೇ ಕಾರಣಕ್ಕೆ ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಸ್ವಾಮಿ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾತ್ರ ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ರಾಜ್ಯಸರ್ಕಾರ ಬದ್ಧವಾಗಿದ್ದು, ದೇಗುಲ ಪ್ರವೇಶ ಮಾಡುವವರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Comments are closed.