ರಾಷ್ಟ್ರೀಯ

ಅಯ್ಯಪ್ಪ ದೇಗುಲಕ್ಕೆ ಸ್ತ್ರೀಯರ ಪ್ರವೇಶ: ವಾಹನ ತಡೆದ ಭಕ್ತರು

Pinterest LinkedIn Tumblr


ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಬುಧವಾರ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯುತ್ತಿದ್ದು, ಒಟ್ಟಾರೆ ಅಲ್ಲಿ ಗೊಂದಲ ಸೃಷ್ಟಿಯಾಗಿದೆ.

ಅಯ್ಯಪ್ಪ ದೇಗುಲಕ್ಕೆ ಸ್ತ್ರೀಯರ ಪ್ರವೇಶವನ್ನು ತಡೆಯುವ ಸಲುವಾಗಿ ನೂರಾರು ಮಹಿಳೆಯರ ಸಹಿತ ಅಯ್ಯಪ್ಪ ಭಕ್ತರು ಶಬರಿಮಲೆಗೆ ಪ್ರವೇಶ ಕಲ್ಪಿಸುವ ನೀಲಕ್ಕಲ್‌ನಲ್ಲಿ ಎಲ್ಲ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದಾರೆ.

ದೇಗುಲಕ್ಕೆ ಪ್ರವೇಶಿಸಲು ಯಾರಾದರೂ ಯುವತಿಯರು ಬರುತ್ತಿದ್ದಾರೆಯೇ ಎಂದು ಭಕ್ತರು ಪರಿಶೀಲಿಸುತ್ತಿದ್ದು, ಅಂತಹ ಪ್ರಯತ್ನ ಇಲ್ಲ ಎಂದು ಖಚಿತಪಡಿಸಿ ವಾಹನಗಳನ್ನು ಮುಂದೆ ಸಾಗಲು ಬಿಡುತ್ತಿದ್ದಾರೆ. ಈ ಬೆಳವಣಿಗೆ ಅಲ್ಲಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದ್ದು, ಆತಂಕಕ್ಕೆ ಕಾರಣವಾಗಿದೆ.

ಅ. 17ರಂದು ದೇಗುಲ ಬಾಗಿಲು ತೆರೆಯಲಾಗುತ್ತಿದ್ದು, ತುಲಾ ಮಾಸದ ಐದು ದಿನಗಳ ಪೂಜೆಯ ಬಳಿಕ ದೇಗುಲ ಬಾಗಿಲು ಮುಚ್ಚಲಾಗುತ್ತದೆ.

ಕೇರಳ ಸರಕಾರ ಸುಪ್ರೀಂಕೋರ್ಟ್‌ ತೀರ್ಪು ಜಾರಿಗೆ ಬದ್ಧವಾಗಿದ್ದರೆ, ತೀರ್ಪು ಜಾರಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಈ ನಡುವೆ, ಶಬರಿಮಲೆಯಿಂದ 20 ಕಿ.ಮೀ. ದೂರದಿಂದಲೇ ಮಹಿಳೆಯರನ್ನು ತಡೆಯಲಾಗುತ್ತಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮಂಗಳವಾರ ಕೊಟ್ಟಾಯಂನಲ್ಲಿ ಧರಣಿ ನಡೆಸಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪಂದಳಂ ರಾಜಮನೆತನ ಮತ್ತು ಪ್ರತಿಭಟನಾನಿರತ ಸಂಘಟನೆಗಳ ಮನವೊಲಿಸಲು ಮಂಗಳವಾರ ದೇವಸ್ವಂ ಮಂಡಳಿ ಕರೆದಿದ್ದ ಸಭೆಯು ವಿಫಲವಾಗುವುದರೊಂದಿಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಸಂಧಾನ ಸಭೆ ವಿಫಲ

ಪರಿಸ್ಥಿತಿ ತಿಳಿಗೊಳಿಸುವ ಕೊನೆಯ ಪ್ರಯತ್ನವಾಗಿ ಶಬರಿಮಲೆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯು ಮಂಗಳವಾರ ಪಂದಲಂ ರಾಜಮನತೆನ ಮತ್ತು ದೇವಸ್ಥಾನದ ಅರ್ಚಕರು, ಹಿಂದೂ ಸಂಘಟನೆಗಳ ಮುಖಂಡರ ಸಭೆ ಕರೆದಿತ್ತು. ಆದರೆ, ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ಚರ್ಚಿಸಲು ದೇವಸ್ವಂ ಮಂಡಳಿ ಆಸಕ್ತಿ ತೋರದ ಕಾರಣ ಪಂದಳಂ ರಾಜಮನೆತನದ ಸದಸ್ಯರು ಮಧ್ಯದಲ್ಲೇ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.

ಈ ಮಧ್ಯೆ ಶಬರಿಮಲೆ ಪ್ರವೇಶಿಸುವ ಯಾರನ್ನೂ ತಡೆಯಲಾಗದು, ಎಲ್ಲರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಕೋರ್ಟ್ ಹೇಳಿದ್ದನ್ನು ಪಾಲಿಸುವಂತೆ ಆಡಳಿತ ಮತ್ತು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ದೇಗುಲ ಪ್ರವೇಶಕ್ಕೆ ಅಡ್ಡಿಪಡಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ದೇಗುಲ ಪ್ರವೇಶಿಸುವವರಿಗೆ ಅಲ್ಲಿನ ಆಡಳಿತ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮುಗಿದ ಬಿಜೆಪಿ ಗಡುವು

ಮೇಲ್ಮನವಿ ಸಲ್ಲಿಸಲು ಬಿಜೆಪಿ 24 ಗಂಟೆ ಗಡುವು ನೀಡಿದ್ದ ಕುರಿತು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ನೀಡಿದ್ದ ಹೇಳಿಕೆ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಬಿಜೆಪಿಯು ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಋುತುಮತಿಯಾದವರು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಬಾರದು ಸಂಪ್ರದಾಯದ ಎಂಬ ಹಿನ್ನೆಲೆಯಲ್ಲಿ 10ರಿಂದ 50 ವರ್ಷ ಪ್ರಾಯದ ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಟಡೆಸಿದ್ದ ಸುಪ್ರೀಂ ಕೋರ್ಟ್‌, ಕಳೆದ ಸೆ.28ರಂದು ಈ ನಿಷೇಧ ತೆರವುಗೊಳಿಸಿ ತೀರ್ಪು ನೀಡಿತ್ತು. ಅಲ್ಲಿಂದಲೂ ಕೇರಳದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂಬ ಒತ್ತಡಗಳಿಗೆ ಸರಕಾರ ಮಣಿದಿಲ್ಲ. ರಾಜಮನೆತನ, ಅಯ್ಯಪ್ಪ ಸ್ವಾಮಿ ದೇಗುಲದ ಅರ್ಚಕರು, ಭಕ್ತರು ಹಾಗೂತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

ಎಲ್ಲ ವಾಹನಗಳ ತಪಾಸಣೆ, ಮಹಿಳೆಯರ ತಡೆ

ಮಹಿಳೆಯರ ದೇಗುಲ ಪ್ರವೇಶವನ್ನು ಶತಾಯಗತಾಯ ತಡೆಯಲು ನಿಲಕಲ್‌ನಲ್ಲಿ ಅಯ್ಯಪ್ಪ ಭಕ್ತರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳೂ ಸೇರಿದಂತೆ ಎಲ್ಲ ವಾಹನಗಳನ್ನೂ ತಡೆದು ತಪಾಸಣೆ ನಡೆಸುತ್ತಿದ್ದಾರೆ. ತಂಡದಲ್ಲಿ ಹಿರಿಯ ಮಹಿಳೆಯರೇ ಹೆಚ್ಚಿದ್ದು, ಅಯ್ಯಪ್ಪ ಮಂತ್ರ ಪಠಿಸುತ್ತಲೇ ತಪಾಸಣೆ ನಡೆಸುತ್ತಿದ್ದಾರೆ. 10ರಿಂದ 50 ವರ್ಷ ವಯೋಮಾನದ ಯಾವ ಮಹಿಳೆಯೂ ನಿಲಕಲ್‌ನಿಂದ ಮುಂದಕ್ಕೆ ಪ್ರಯಾಣಿಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ವರದಿ ಮಾಡಲು ಹೋದ ಪತ್ರಕರ್ತೆಯರನ್ನೂ ನಿಲಕಲ್‌ನಿಂದ ಮುಂದಕ್ಕೆ ಬಿಟ್ಟಿಲ್ಲ.

ಕಾನೂನು ಕೈಗೆತ್ತಿಕೊಂಡರೆ ಹುಷಾರ್‌

ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೆ ಬದ್ಧ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದು, ಮಹಿಳೆಯರ ಪ್ರವೇಶ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸರಕಾರ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮುಖ್ಯ ಅರ್ಚಕರ ಗೈರು ಸಾಧ್ಯತೆ

ಸುಪ್ರೀಂ ಕೋರ್ಟ್‌ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಬರಿಮಲೆ ದೇಗುಲದ ಮುಖ್ಯ ಅರ್ಚಕರಾದ ಕಂಡರಾರು ಮಹೇಶ್ವರಾರು ತಂತ್ರಿ (25) ಬುಧವಾರ ಪೂಜೆಗೆ ಗೈರಾಗುವ ಸಾಧ್ಯತೆಯಿದೆ. ಈಗಾಗಲೇ ಮಹಿಳೆಯರ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದಕ್ಕೆ ಅವಕಾಶ ನೀಡಿದರೆ ಹಿಂಸಾಚಾರ ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರ ಸುಗ್ರೀವಾಜ್ಞೆ ತಂದು ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೆ ಅವಕಾಶ ಕಲ್ಪಿಸಬೇಕು.
– ಆಂಟೋ ಆ್ಯಂಟನಿ, ಪತ್ತನಂತಿಟ್ಟ ಕ್ಷೇತ್ರದ ಸಂಸದ

ಶಬರಿಮಲೆ ಸಮರಾಂಗಣವಾಗಬಾರದು ಎಂಬುದು ನಮ್ಮ ಆಶಯ.
– ಶಶಿಕುಮಾರ್‌ ವರ್ಮ, ಪಂದಳಂ ಕುಟುಂಬದ ಸದಸ್ಯ

ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದರೆ ದೇವಸ್ವಂ ಮಂಡಳಿ ಏನು ಮಾಡಲು ಸಾಧ್ಯ. ಬಿಕ್ಕಟ್ಟು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಅ. 19ಕ್ಕೆ ಮತ್ತೆ ಸಭೆ ನಡೆಯಲಿದ್ದು ಅಂದು ಮರುಪರಿಶೀಲನೆ ಅರ್ಜಿ ಬಗ್ಗೆ ಚರ್ಚೆ ನಡೆಯಲಿದೆ.
– ಎ. ಪದ್ಮಕುಮಾರ್‌, ಟಿಡಿಬಿ ಅಧ್ಯಕ್ಷ

Comments are closed.