ರಾಷ್ಟ್ರೀಯ

ಶಬರಿಮಲೆ: ಸಂಧಾನ ಸಭೆಗೆ ಭಾಗವಹಿಸಲು ದೇವಸ್ಥಾನದ ತಂತ್ರಿ ಕುಟುಂಬ,ರಾಜ ಮನೆತನಗಳು ನಿರಾಕರಣೆ

Pinterest LinkedIn Tumblr


ತಿರುವನಂತಪುರ/ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಎದ್ದಿರುವ ಬಿಕ್ಕಟ್ಟನ್ನು ಶಮನಗೊಳಿಸುವ ಕೇರಳ ಸರಕಾರದ ಪ್ರಯತ್ನಕ್ಕೆ ಭಾನುವಾರ ಹಿನ್ನಡೆಯಾಗಿದೆ.

ಸಿಎಂ ಪಿಣರಾಯಿ ವಿಜಯನ್‌ ಅವರು ಸೋಮವಾರ ಕರೆದಿರುವ ಸಂಧಾನ ಸಭೆಯಲ್ಲಿ ಭಾಗವಹಿಸಲು ದೇವಸ್ಥಾನದ ತಂತ್ರಿ ಕುಟುಂಬ ಮತ್ತು ರಾಜ ಮನೆತನಗಳು ನಿರಾಕರಿಸಿವೆ. ಈ ನಡುವೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆಗ್ರಹಿಸಿ ಕೇರಳ, ದಿಲ್ಲಿ ಸೇರಿದಂತೆ ದೇಶದ ಹಲವೆಡೆ ಸೋಮವಾರ ಭಕ್ತರ ಪ್ರತಿಭಟನೆ ನಡೆಯಿತು.

ಆಡಳಿತಾರೂಢ ಎಡರಂಗ ಸುಪ್ರೀಂಕೋರ್ಟ್‌ ತೀರ್ಪಿನ ಪರವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ವಿರೋಧಿ ನಿಲುವು ಹೊಂದಿವೆ. ದೇವಾಲಯದ ಆಡಳಿತ ಮಂಡಳಿ, ತಂತ್ರಿಗಳು, ದೇವಳಕ್ಕೆ ಸಂಬಂಧಿಸಿದ ಪಂದಳಂ ರಾಜ ಮನೆತನಗಳು ಮಹಿಳೆಯರ ಪ್ರವೇಶಕ್ಕೆ ವಿರುದ್ಧವಾಗಿವೆ. ಈ ನಡುವೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರಕಾರ ಶಬರಿಮಲೆಯಲ್ಲಿ 500 ಮಹಿಳಾ ಪೊಲೀಸರ ನಿಯೋಜನೆಗೆ ಮುಂದಾಗಿರುವುದು ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ದಿಲ್ಲಿ ಸಹಿತ ಹಲವೆಡೆ ಪ್ರತಿಭಟನೆ: ಸುಪ್ರೀಂ ತೀರ್ಪಿನ ವಿರುದ್ಧ ಕೊಟ್ಟಾಯಂ, ಪತ್ತನಂತಿಟ್ಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಹಾಗೂ ದಿಲ್ಲಿಯಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ.

ರಾಜಕೀಯ ನಿಲುವುಗಳೇನು?
ಕಾಂಗ್ರೆಸ್‌ ಮತ್ತು ಬಿಜೆಪಿ ಮಹಿಳಾ ಪ್ರವೇಶಕ್ಕೆ ವಿರುದ್ಧವಾಗಿವೆ. ತಾನು ಭಕ್ತರ ನಂಬಿಕೆ ಪರವಾಗಿ ನಿಲ್ಲುವುದಾಗಿ ಕಾಂಗ್ರೆಸ್‌ ಸ್ಪಷ್ಟಪಡಿಸಿದ್ದರೆ, ಸರಕಾರವು ಭಕ್ತರ ನಂಬಿಕೆಯನ್ನು ಕಡೆಗಣಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜಕೀಯ ಲಾಭಕ್ಕಾಗಿ ಕೆಲವು ರಾಜಕೀಯ ಪಕ್ಷಗಳು ಸಮಸ್ಯೆ ಸೃಷ್ಟಿಸುತ್ತಿವೆ. ಅವರ ಕುಚೋದ್ಯ ಫಲ ನೀಡುವುದಿಲ್ಲ ಎಂದು ಕೇರಳ ಮುಜರಾಯಿ ಸಚಿವ ಕಡಂಪಳ್ಳಿ ಸುರೇಂದ್ರನ್‌ ಹೇಳಿದ್ದಾರೆ.

ಸರಕಾರದ ಮಧ್ಯಪಥ
ಒಂದು ಹಂತದಲ್ಲಿ ತೀರ್ಪಿನ ಬಗ್ಗೆ ಮೌನವಾಗಿದ್ದ ಎಡರಂಗ ಸರಕಾರ ಬಳಿಕ, ”ನಾವು ಮಹಿಳಾ ಸಮಾನತೆಯ ಪರವಾಗಿದ್ದೇವೆ. ಹಾಗಂತ, ಮಹಿಳೆಯರನ್ನೇನೂ ದೇವಳಕ್ಕೆ ಕರೆದೊಯ್ಯುವ ಕೆಲಸ ಮಾಡುವುದಿಲ್ಲ,” ಎಂದು ಹೇಳುವ ಮೂಲಕ ಮಧ್ಯಪಥವನ್ನು ಹಿಡಿದಿದೆ. ಜತೆಗೆ ಮಾತುಕತೆಯ ದಾರಿಯನ್ನೂ ತೆರೆದಿದೆ.

ಪ್ರತಿಭಟನೆ ತೀವ್ರವಾಗಿದ್ದೇಕೆ?
ಸಿಪಿಎಂ ನೇತೃತ್ವದ ಸರಕಾರ ಮೊದಲಿನಿಂದಲೂ ಮಹಿಳಾ ಪ್ರವೇಶದ ಪರವಾಗಿತ್ತು.
ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂಬ ಮನವಿಗೆ ಸ್ಪಂದಿಸದಿರುವುದು.
ಮಹಿಳಾ ಪೊಲೀಸ್‌ ನಿಯೋಜನೆಗೆ ಮೂಲಕ ತೀರ್ಪು ಜಾರಿ ಸೂಚನೆ ನೀಡಿದ್ದು.

ಸುಪ್ರೀಂ ತೀರ್ಪು ಏನಿತ್ತು?
ದೈಹಿಕ ಕಾರಣಗಳಿಗಾಗಿ ಮಹಿಳೆಯರಿಗೆ ದೇವಳ ಪ್ರವೇಶ ಹಕ್ಕು ನಿರಾಕರಿಸುವಂತಿಲ್ಲ.
ಧರ್ಮದ ಪರದೆ ಬಳಸಿ ಪೂಜಾ ಹಕ್ಕು ಕಸಿಯುವುದು ಮಾನವ ಘನತೆಗೆ ವಿರೋಧ.
ದೇಗುಲದ ನಿರ್ಬಂಧಗಳು ಧಾರ್ಮಿಕ ಆಚರಣೆಯಲ್ಲಿ ಇರಲೇಬೇಕಾದ್ದೇನೂ ಅಲ್ಲ.

ಮಾತುಕತೆಯಿಂದ ಪ್ರಯೋಜನವಿಲ್ಲ: ತಂತ್ರಿ ಕುಟುಂಬ, ರಾಜ ಮನೆತನ
ಮಹಿಳಾ ಪ್ರವೇಶಕ್ಕೆ ಅವಕಾಶ ನೀಡುವುದರ ವಿರುದ್ಧ ರಾಜ್ಯಾದ್ಯಂತ ವಿರೋಧದ ದನಿಗಳು ಹೆಚ್ಚುತ್ತಿರುವ ನಡುವೆಯೇ, ಸಿಎಂ ಪಿಣರಾಯಿ ವಿಜಯನ್‌ ಅವರು ಸೋಮವಾರ ಸಂಧಾನ ಸಭೆ ಕರೆದಿದ್ದರು. ದೇವಳದ ಅರ್ಚಕತ್ವ ಹೊಂದಿರುವ ತಂತ್ರಿ ಕುಟುಂಬ ಮತ್ತು ಆನುವಂಶಿಕವಾಗಿ ದೇವಳಕ್ಕೆ ಹೊಂದಿಕೊಂಡ ಪಂದಳ ರಾಜ ಮನೆತನದ ಸದಸ್ಯರನ್ನು ಆಹ್ವಾನಿಸಿದ್ದರು.

ಆದರೆ, ಮೇಲ್ಮನವಿ ಸಲ್ಲಿಸಲು ಆಸಕ್ತಿ ತೋರದ ಸರಕಾರದ ಜತೆ ಯಾವ ಮಾತುಕತೆ ನಡೆಸಿದರೂ ಅದು ಪ್ರಯೋಜನವಿಲ್ಲ ಎಂದು ಹೇಳಿ ಸಭೆಯಲ್ಲಿ ಪಾಲ್ಗೊಳ್ಳಲು ತಂತ್ರಿ ಕುಟುಂಬ ಹಾಗೂ ಪಂದಳಂ ರಾಜಕುಟುಂಬ ನಿರಾಕರಿಸಿದೆ.

ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದಿಂದ ಶಬರಿಮಲೆಯ ಪಾವಿತ್ರ್ಯಕ್ಕೆ ಹಾನಿಯಾಗುತ್ತದೆ. ಇಲ್ಲಿನ ಸಂಪ್ರದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳಾ ಪೊಲೀಸರ ನಿಯೋಜನೆ ಅವಸರದ ತೀರ್ಮಾನ. ಸುಪ್ರೀಂ ತೀರ್ಪು ಪ್ರಶ್ನಿಸಿ ಸರಕಾರ ಮೇಲ್ಮನವಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಅಲ್ಲಿಯವರೆಗೂ ಸರಕಾರದ ಜತೆ ನಡೆಸುವ ಯಾವುದೇ ಮಾತುಕತೆಗೂ ಬೆಲೆ ಇರುವುದಿಲ್ಲ ಎಂದು ಮೂವರು ತಂತ್ರಿಗಳಲ್ಲಿ ಒಬ್ಬರಾಗಿರುವ ಕಂದರಾರು ಮೋಹನಾರು ಮತ್ತು ಪಂದಳಂ ರಾಜಕುಟುಂಬದ ಸದಸ್ಯ ಶಶಿಕುಮಾರ್‌ ವರ್ಮಾ ತಿಳಿಸಿದ್ದಾರೆ.

Comments are closed.