ರಾಷ್ಟ್ರೀಯ

26 ವರ್ಷಗಳ ನಂತರ ನಾಪತ್ತೆಯಾಗಿದ್ದ ವ್ಯಕ್ತಿಯ ಬಂಧನ!: ದೂರು ವಾಪಸ್ ಪಡೆದ ದೂರುದಾರ!

Pinterest LinkedIn Tumblr


ಕೊಚ್ಚಿ: ಇದೊಂದು ವಿಶೇಷ ಪ್ರಕರಣ. ಕೇರಳದಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬನನ್ನು ಬರೋಬ್ಬರಿ 26 ವರ್ಷಗಳ ನಂತರ ಬಂಧಿಸಲಾಗಿದೆ.

ಮಲಪ್ಪುರಂನ ಎರಮಂಗಲಂನಲ್ಲಿ ಕೋಳಿಕ್ಕೋಡ್‌ನ ದಿವಾಕರನ್ (48 ವರ್ಷ) ಎಂಬಾತನನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಕರಣದಲ್ಲಿ ದೂರು ನೀಡಿದ್ದ ವ್ಯಕ್ತಿ ಮಾತ್ರ, ಆರೋಪಿ ಪತ್ತೆಯಾಗುತ್ತಲೇ ದೂರು ವಾಪಸ್ ಪಡೆದಿದ್ದು, ನ್ಯಾಯಾಲಯದಲ್ಲೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

1992ರಲ್ಲಿ ಪ್ರಕರಣ ಆರಂಭವಾಗಿದ್ದು, ದಿವಾಕರನ್ ವಿದೇಶಕ್ಕೆ ಉದ್ಯೋಗಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ. ಆದರೆ ಅದೇ ಸಂದರ್ಭದಲ್ಲಿ ನೆರೆಮನೆಯ ಪ್ರಭಾಕರನ್ ಜತೆ ಜಗಳವುಂಟಾಗಿ, ಆತನಿಗೆ ಹಲ್ಲೆ ನಡೆಸಿ ಪರಾರಿಯಾದ. ಪ್ರಭಾಕರನ್ ಪೊಲೀಸ್ ದೂರು ನೀಡಿದ್ದ. ದಿವಾಕರನ್ ಮುಂಬಯಿಗೆ ತೆರಳಿ ಅಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿಂದ ಒಮ್ಮೆ ಮನೆಗೆ ಫೋನ್ ಮಾಡಿದ್ದ. ಆದರೆ ನಂತರ 1992-93ರಲ್ಲಿ ಮುಂಬಯಿಯಲ್ಲಿ ದಂಗೆ ಉಂಟಾಗಿದ್ದು, ಅದಾದ ಬಳಿಕ ಮನೆಯವರನ್ನು ದಿವಾಕರನ್ ಸಂಪರ್ಕಿಸಿರಲಿಲ್ಲ. ಇತ್ತ ಮನೆಯವರು ಕೂಡ ಆತ ಸತ್ತಿರಬಹುದೆಂದು ತೀರ್ಮಾನಿಸಿದ್ದರು.

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕೋರ್ಟ್‌ ಕೂಡ 1995ರಲ್ಲಿ ದಿವಾಕರನ್‌ನನ್ನು ಅಪರಾಧಿ ಎಂದು ಘೋಷಿಸಿ ತೀರ್ಪು ನೀಡಿತು. ಜತೆಗೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಲಾಗಿತ್ತು. ಆದರೆ 2009ರಲ್ಲಿ ದಿವಾಕರನ್ ಕೇರಳಕ್ಕೆ ಮರಳಿ ಕೋಳಿಕ್ಕೋಡ್‌ನಲ್ಲಿ ಬಂದು ತಲೆಮರೆಸಿಕೊಂಡಿದ್ದ. ಇದಾದ 9 ವರ್ಷದ ಬಳಿಕ ಕೇರಳ ಪೊಲೀಸರಿಗೆ ದಿವಾಕರನ್ ಕೋಳಿಕ್ಕೋಡ್‌ನಲ್ಲಿ ಇರುವ ಬಗ್ಗೆ ತಿಳಿದುಬಂದು ಆತನನ್ನು ಬಂಧಿಸಿದ್ದಾರೆ.

ಆದರೆ ದಿವಾಕರನ್ ಬಂಧನವಾಗುತ್ತಲೇ ಆತನ ತಾಯಿ, ಇಬ್ಬರು ಸಹೋದರಿಯರು ಬಂದು ಆತನನ್ನು ಮಾತನಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಂದ ದೂರುದಾರ ಪ್ರಭಾಕರನ್, ಮನೆಯವರನ್ನು ಸಮಾಧಾನಿಸಿ, ದೂರು ವಾಪಸ್ ಪಡೆದಿದ್ದು, ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಮೂಲ ವರದಿ: ಸಮಯಂ ಮಲಯಾಳಂ

Comments are closed.