ರಾಷ್ಟ್ರೀಯ

ನಾವು ಕೇಳಿದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಮಾತ್ರ ಮೈತ್ರಿ: ಮಾಯಾವತಿ

Pinterest LinkedIn Tumblr


ನವದೆಹಲಿ: ನಾವು ಕೇಳಿದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಮಾತ್ರ ಎಲ್ಲ ಚುನಾವಣೆಯಲ್ಲಿಯೂ ಮೈತ್ರಿಗೆ ಸಿದ್ಧ. ಇಲ್ಲದಿದ್ದರೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಷರತ್ತು ವಿಧಿಸುವ ಮೂಲಕ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಕಠಿಣ ಸಂದೇಶ ಕಳುಹಿಸಿದ್ದಾರೆ.

ಭಾನುವಾರ ಲಕ್ನೋದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆ ಸ್ಪಂದಿಸುವ ಯಾವುದೇ ಪಕ್ಷವಾದರೂ ಸರಿ ಮೈತ್ರಿ ಸಿದ್ಧ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಜಂಟಿಯಾಗಿ ಕಣಕ್ಕೆ ಇಳಿಯುತ್ತೇವೆ. ಇಲ್ಲದಿದ್ದರೆ ಏಕಾಂಗಿಯಾಗಿಯೇ ಮುಂಬರುವ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.

ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ತಮ್ಮ ವಿಫಲತೆಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಅಟಲ್ ಬಿಹಾರಿ ವಾಜಪೇಯಿ ನಿಧನವನ್ನೇ ಅಸ್ತ್ರವಾಗಿ ಬಳಸುತ್ತಿವೆ ಎಂದು ದೂರಿದರು.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ 2019ರಲ್ಲಿ ಮೋದಿ ಸರ್ಕಾರವನ್ನು ಸೋಲಿಸಲು ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ, ಎಸ್‍ಪಿ, ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಚುನಾವಣೆ ಘೋಷಣೆಯಾಗುವ ಮುನ್ನವೇ ಮಾಯಾವತಿ ಸ್ಥಾನ ಹಂಚಿಕೆ ಸಂಬಂಧ ಮಾತನಾಡಿದ್ದು ಕಾಂಗ್ರೆಸ್ ಮತ್ತು ಎಸ್‍ಪಿ ಈ ಷರತ್ತನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

Comments are closed.