ರಾಷ್ಟ್ರೀಯ

2 ವರ್ಷ ನಂತರ ಜೇಟ್ಲಿ-ಮಲ್ಯ ಭೇಟಿ ಕುರಿತು ಕಾಂಗ್ರೆಸ್‌ ಸಂಸದ ಪುನಿಯಾ ಹೇಳಿದ್ದೇಕೆ?: ಪಿಯೂಷ್‌ ಗೋಯಲ್‌

Pinterest LinkedIn Tumblr

ಹೊಸದಿಲ್ಲಿ: ಬಹುಕೋಟಿ ಸಾಲ ಪಡೆದು ವಂಚನೆಯ ಆರೋಪ ಎದುರಿಸುತ್ತಿರುವ ವಿಜಯ್‌ ಮಲ್ಯ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಕುರಿತು ಸಂಸದ ಪಿಎಲ್‌ ಪುನಿಯಾ ನೀಡಿರುವ ಹೇಳಿಕೆ ಒತ್ತಡದಲ್ಲಿ ನೀಡಿರುವುದು ಎಂದೆನಿಸುತ್ತದೆ ಎಂದು ಬಿಜೆಪಿ ತಿವಿದಿದೆ.

ಈ ಸಂಬಂಧ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸುದ್ದಿಗೋಷ್ಠಿ ನಡೆಸಿದ್ದು, ವಿಜಯ್‌ ಮಲ್ಯ ಹಾಗೂ ಜೇಟ್ಲಿ ಭೇಟಿ ಮಾಡಿ ಮಾತುಕತೆ ಮಾಡಿರುವುದು ತಿಳಿದಿದ್ದಲ್ಲಿ, ಕಳೆದ ಎರಡೂವರೆ ವರ್ಷದಿಂದ ಯಾಕಾಗಿ ಸುಮ್ಮನಿದ್ದಾರೆ? ಅವರು ಗೊಂದಲ ಮಾಡಿಕೊಂಡಂತಿದೆ. ಅಥವಾ ಯಾರದ್ದಾದರೂ ಒತ್ತೆಕ್ಕೆ ಮಣಿದು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ವಿಚಾರದಲ್ಲಿ ಜುಗಲ್‌ ಬಂಧಿಯಾಡುತ್ತಿದ್ದಾರೆ. 2010ರಿಂದ ಯುಪಿಎ ಸರಕಾರ ಕಿಂಗ್‌ಫಿಷರ್‌ ಹಾಗೂ ವಿಜಯ್‌ ಮಲ್ಯ ಅವರಿಗಾಗಿ ಎಲ್ಲ ಬಗೆಯ ನೀತಿ, ನಿಯಮಗಳನ್ನು ಗಾಳಿಗೆ ತೂರಿದೆ. ಇದೀಗ ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಡಲು ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದರು.

ವಿಜಯ್‌ ಮಲ್ಯ ಅವರಿಗೆ ಸಾಲ ನೀಡಿದ್ದು ಯುಪಿಎ ಸರಕಾರ. ಯಾಕಾಗಿ ನೀಡಿತ್ತು? ಭಾರತೀಯ ರಿಸರ್ವ್‌ ಬ್ಯಾಂಕ್‌ಗೂ ಒತ್ತಡ ಹೇರಲಾಗಿತ್ತು. ಮಲ್ಯ ಅವರನ್ನು ಎಲ್ಲ ನಿಯಮಗಳಿಂದ ಹೊರಗಿಡಲು ಏನು ಕಾರಣ ಎಂಬುದಕ್ಕೆ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮೊದಲು ಉತ್ತರಿಸಬೇಕು ಎಂದು ಹೇಳಿದ್ದಾರೆ.

ಸಚಿವ ಜೇಟ್ಲಿ ಅವರೊಂದಿಗೆ ವಿಜಯ್‌ ಮಲ್ಯ ಮಾತುಕತೆ ನಡೆಸುವುದನ್ನು ನಾನು ಕಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೂ ನೋಡಬಹುದು. ನಾನು ಹೇಳಿರುವುದು ಸುಳ್ಳಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವೆ. ನಿಜವಾದರೆ ಜೇಟ್ಲಿ ರಾಜಕೀಯ ಬಿಡಲಿ ಎಂದು ಪಿಎಲ್‌ ಪುನಿಯಾ ಹೇಳಿಕೆ ನೀಡಿದ್ದರು.

Comments are closed.