ರಾಷ್ಟ್ರೀಯ

ನಾಗಾಲ್ಯಾಂಡ್ ಪ್ರವಾಹ: ನೂರಾರು ಗ್ರಾಮಗಳಿಗೆ ಸಂಪರ್ಕ ಕಡಿತ

Pinterest LinkedIn Tumblr


ಕೊಹಿಮಾ: ನಾಗಾಲ್ಯಾಂಡ್‍ನ ಫೆಕ್ ಮತ್ತು ಕಿಫೈರ್ ಜಿಲ್ಲೆಗಳು ಭೀಕರ ಪ್ರವಾಹಕ್ಕೆ ಸಿಲುಕಿದ್ದು ಭೂಕುಸಿತದಿಂದಾಗಿ ಈ ಎರಡೂ ಜಿಲ್ಲೆಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಸಿಲುಕಿರುವ ಗ್ರಾಮದ ಜನರನ್ನು ಸಂಪರ್ಕಿಸುವುದೇ ದುಸ್ತರವಾಗಿದೆ.

ಫೆಕ್ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದ್ದು ಮೂಲಸೌಕರ್ಯ ಪುನರ್‌ ನಿರ್ಮಾಣಕ್ಕೆ ಅಂದಾಜು 416.06 ಲಕ್ಷ ರೂ. ಹಾಗೂ ಕೃಷಿ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಪುನರ್‌ನಿರ್ಮಿಸಲು 281.34 ಲಕ್ಷ ರೂ.ಗಳು ಬೇಕಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಎರಡೂ ಜಿಲ್ಲೆಗಳಲ್ಲಿ ಸಂಭವಿಸಿರುವ ನಷ್ಟದ ವರದಿಯನ್ನು ಐದು ಸದಸ್ಯರ ಅಂತರ ಸಚಿವಾಲಯದ ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ಸಲ್ಲಿಸಿದೆ. ಉಳಿದ ಜಿಲ್ಲೆಗಳ ವರದಿ ಇನ್ನೂ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಕ್ರಮವಾಗಿ 10,000 ರೂ. ಹಾಗೂ 5,000 ರೂ.ಗಳನ್ನು ಸಂಪೂರ್ಣ ಹಾನಿಗೊಳಗಾದ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ಥಿ ಕಾರ್ಯಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ ನಾಗಾಲ್ಯಾಂಡ್ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಉಪ ಆಯುಕ್ತ ಓರೆನ್‍ತುಂಗ್.

ಭೂಕುಸಿತದಿಂದಾಗಿ ಜುಲೈ 29ರಿಂದಲೇ ಕಿಫೈರ್‌‍ನಿಂದ ಕೊಹಿಮಾಗೆ ಮತ್ತು ತುಯೆನ್ಸಾಂಗ್ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎನ್‍ಎಚ್-202 ಸಂಪೂರ್ಣ ಬಂದ್ ಆಗಿದೆ. ತುಯೆನ್ಸಾಂಗ್ ಜಿಲ್ಲೆಯ ಯೇ ಸೇತುವೆ ತೀವ್ರ ಹಾನಿಗೊಳಗಾಗಿದೆ ಎಂದು ಉಪ ಆಯುಕ್ತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಮುಖ್ಯಸ್ಥ ಅಲಿ ಶಿಹಬ್ ತಿಳಿಸಿದ್ದಾರೆ.

ಅಗತ್ಯ ವಸ್ತುಗಳನ್ನು ಪೂರೈಸುವುದೂ ದುಸ್ತರವಾಗಿದೆ. ಕಿಫೈರ್ ಜಿಲ್ಲೆಯಲ್ಲಿ ಒಟ್ಟು 110 ಹಳ್ಳಿಗಳಿದ್ದು ಭೂಕುಸಿತದಿಂದಾಗಿ ಸಂಪೂರ್ಣ ಹಾಳಾದ ರಸ್ತೆ ಮತ್ತು ಹವಾಮಾನ ವೈಪರೀತ್ಯದ ಕಾರಣ ವಿಪತ್ತು ನಿರ್ವಹಣ ಸಮಿತಿ ಬಹುತೇಕ ಹಳ್ಳಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ರಾಷ್ಟೀಯ ಹೆದ್ದಾರಿಗಳನ್ನು ಕೇಂದ್ರ ಸರಕಾರ ಕೂಡಲೆ ದುರಸ್ತಿಗೊಳಿಸಿದರೆ ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಪರಿಹಾರ ಕಲ್ಪಿಸಬಹುದು ಎಂದಿದ್ದಾರೆ ಶಿಹಬ್.

Comments are closed.