ರಾಷ್ಟ್ರೀಯ

ಕೇರಳ; ಸಂತ್ರಸ್ತರ ವಸ್ತುಗಳ ದುರ್ಬಳಕೆ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ಅಮಾನತು

Pinterest LinkedIn Tumblr


ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ದೇಶ-ವಿದೇಶಗಳಿಂದ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಬೇರೆ ಬೇರೆ ಸರ್ಕಾರಗಳೂ ಪರಿಹಾರವಾಗಿ ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿದ್ದವು. ಆದರೆ, ಪರಿಹಾರ ರೂಪದಲ್ಲಿ ಬಂದ ವಸ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೇರಳ ಸರ್ಕಾರದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಕೇರಳದ ಹಿರಿಯ ಸರ್ಕಾರಿ​ ಅಧಿಕಾರಿಯೊಬ್ಬರು ನೀಡಿರುವ ದೂರಿನ ಅನ್ವಯ ಎಸ್​. ಥಾಮಸ್​ ಮತ್ತು ಎಂ.ಪಿ. ದಿನೇಶ್​ ಎಂಬ ಇಬ್ಬರು ಸರ್ಕಾರಿ ಅಧಿಕಾರಿಗಳು ಕೇರಳದ ನಿರಾಶ್ರಿತರಿಗಾಗಿ ದೇಶದ ಮೂಲೆಮೂಲೆಯಿಂದ ಬಂದಿದ್ದ ಪರಿಹಾರ ಸಾಮಗ್ರಿಗಳನ್ನು ಪನಮಾರಂ ಎಂಬ ಊರಿನ ನಿರಾಶ್ರಿತ ಕೇಂದ್ರದ ಬಳಿ ತಮ್ಮ ವಾಹನಗಳಿಗೆ ತುಂಬಿಕೊಳ್ಳುತ್ತಿದ್ದರು. ನಿರಾಶ್ರಿತರಿಗಾಗಿ ಬಂದಿದ್ದ ವಸ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಥಾಮಸ್​ ಮತ್ತು ದಿನೇಶ್​, ಪನಮಾರಂ ನಿರಾಶ್ರಿತ ಕೇಂದ್ರದಿಂದ ಬೇರೊಂದು ಪ್ರದೇಶದಲ್ಲಿರುವ ನಿರಾಶ್ರಿತರಿಗಾಗಿ ವಾಹನದಲ್ಲಿ ವಸ್ತುಗಳನ್ನು ಸಾಗಿಸುತ್ತಿದ್ದೆವು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸ್ಥಳೀಯರು ನಮ್ಮ ವಾಹನವನ್ನು ಅಡ್ಡಗಟ್ಟಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ರೀತಿಯ ಘಟನೆ ಚೆನಗನ್ನೂರ್​ನಲ್ಲಿಯೂ ನಡೆದಿದ್ದು, ಇಲ್ಲಿನ ಸರ್ಕಾರಿ ಸಿಬ್ಬಂದಿಗಳು ಇದೇರೀತಿ ಪರಿಹಾರ ವಸ್ತುಗಳನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

Comments are closed.