
ನವದೆಹಲಿ : ಅಟಲ್ ಬಿಹಾರಿ ವಾಜಪೇಯಿ ದೇಶಕಂಡ ಅದ್ಭುತ ವಾಗ್ಮಿ. ಹಿಂದಿ ಭಾಷೆ ಅರಿಯದವರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ವಾಜಪೇಯಿ ಸುಲಲಿತವಾಗಿ ಮಾತನಾಡುತ್ತಿದ್ದರು. ರಾಜಕೀಯ ಎದುರಾಳಿಗಳನ್ನು ಹಣಿಯಲು ಅವರು ಬಳಸುತ್ತಿದ್ದುದು ಕೆಲವೇ ಶಬ್ದಗಳನ್ನು. ತೀಕ್ಷ್ಣ ಪ್ರತಿಕ್ರಿಯೆ, ಕರಾರುವಕ್ ವಾಕ್ಚಾತುರ್ಯದಿಂದ ದೇಶವನ್ನೇ ಗೆದ್ದ ವಾಜಪೇಯಿ ಅವರ ಹೃದಯ ವಿಶಾಲತೆ ಮತ್ತು ಚಮತ್ಕಾರಿ ಮಾತುಗಳ ಬುತ್ತಿ ಇಲ್ಲಿದೆ.
1998ರಲ್ಲಿ ಮುಜಾಫರ್ ಅಲಿಯವರು ಲೋಕಸಭೆ ಚುನಾವಣೆಯಲ್ಲಿ ಲಕನೌ ಕ್ಷೇತ್ರದಿಂದ ವಾಜಪೇಯಿ ಅವರ ವಿರುದ್ಧ ಕಣಕ್ಕಿಳಿದಿದ್ದರು. ಚುನಾವಣಾ ಪ್ರಚಾರದ ವೇಳೆ ವಾಜಪೇಯಿ ಮತ್ತು ಅಲಿಯವರು ಬಕ್ಷಿ ಕಾ ತಲಾಬ್ ಏರಿಯಾದಲ್ಲಿ ಮುಖಾಮುಖಿಯಾದರು. ಯಾರು ಮೊದಲು ಹೋಗಬೇಕು ಎಂಬ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಆಗ ಕಾರಿನಿಂದ ಕೆಳಗಿಳಿದ ವಾಜಪೇಯಿ ಮಜಾಫರ್ ಅಲಿವರು ಮೊದಲು ಮುನ್ನಡೆಯಲು ಯೋಗ್ಯರು ಎಂದರು. ನಂತರ ಅಲಿ ಹೋಗುವವರೆಗೂ ಕಾದರು.
ವಾಜಪೇಯಿ ಲಕನೌ ಸಂಸದರಾಗಿದ್ದಾಗ ಒಮ್ಮೆ ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡುತ್ತಿದ್ದರು. ವರದಿಗಳ ಪ್ರಕಾರ ಬಿಜೆಪಿ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಸೋಲುವ ಸಾಧ್ಯತೆಯಿತ್ತು. ಆಗ ಬಹಿರಂಗ ಸಭೆಯಲ್ಲಿ ಮಾತನಾಡಿದ ವಾಜಪೇಯಿ ಹಾಸ್ಯಾತ್ಮಕವಾಗಿ ಆಡಿದ ಮಾತು ಎರಡೂ ಕ್ಷೇತ್ರಗಳನ್ನು ಬಿಜೆಪಿಗೆ ಒಲಿಯುವಂತೆ ಮಾಡಿತ್ತು. ಅದೇನು ಗಂಟೆಗಳ ಭಾಷಣವಾಗಿರಲಿಲ್ಲ. ಅದೊಂದು ಸಾಲು ಜನರನ್ನು ಬಿಜೆಪಿಯತ್ತ ವಾಲುವಂತೆ ಮಾಡಿತ್ತು. ನನಗೆ ಕುರ್ತಾ ನೀಡಿ ಗೌರವಿಸಿದ್ದೀರಿ, ಈಗ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಿಗೆ ಪೈಜಾಮ ನೀಡಲು ಹೊರಟಿದ್ದೀರಿ. ಪೈಜಾಮವನ್ನೂ ನಮಗೇ ನೀಡಿ ಎಂಬ ಚಾಣಾಕ್ಷತನದ ಮಾತುಗಳನ್ನು ವಾಜಪೇಯಿ ಆಡಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾದಾಗ ವಾಜಪೇಯಿ ಕುಸಿದುಹೋಗಿದ್ದರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಹಲವು ನಿಮಿಷಗಳ ಕಾಲ ಭಾವುಕರಾಗಿ ಕುಳಿತಲ್ಲೇ ಕುಳಿತಿದ್ದರು. ನಂತರ ಕೇವಲ ಎರಡು ಪದಗಳನ್ನಾಡಿದರು. “ಸರಿಪಡಿಸಲಾಗದ ಹಾನಿ,” ಎಂದಷ್ಟೇ ಹೇಳಿ ದುಖಃಪಟ್ಟಿದ್ದರು.
1991ರ ಚುನಾವಣೆಗೂ ಮುನ್ನ ದಿನಪತ್ರಿಕೆಯೊಂದು ಪೂರ್ವಾಗ್ರಹ ಪೀಡಿತ ಸಮೀಕ್ಷೆಯೊಂದನ್ನು ಬಿಡುಗಡೆ ಮಾಡಿತ್ತು. ವಾಜಪೇಯಿ ನೇತೃತ್ವದ ಬಿಜೆಪಿ ಅಷ್ಟೊಂದು ಖ್ಯಾತಿ ಹೊಂದಿರದ ಕಾಂಗ್ರೆಸ್ನ ರಂಜಿತ್ ಸಿಂಗ್ ವಿರುದ್ಧ ಹೀನಾಯ ಸೋಲು ಕಾಣಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಎಲ್ಲರೂ ಅಂದುಕೊಂಡ ಪ್ರಕಾರ ವಾಜಪೇಯಿ ಮಾಧ್ಯಮದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ವಾಜಪೇಯಿ ಕೋಪಗೊಳ್ಳಲಿಲ್ಲ. ಅದೇ ದಿನ ಯಾತ್ರೆಯೊಂದರಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪತ್ರಿಕೆಯ ಸಮೀಕ್ಷೆಯ ಪ್ರಕಾರ ನಾವು ಸೋಲಲಿದ್ದೇವೆ. ಕಾರ್ಯಕರ್ತರೇ ಎದ್ದೇಳಿ, ಕೆಲಸ ಆರಂಭಿಸಿ. ಆ ಮೂಲಕ ನಾನು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿ ಎಂದಿದ್ದರು. ಖುದ್ದು ಸಮೀಕ್ಷೆ ಪ್ರಕಟಿಸಿದ ಪತ್ರಿಕೆಗೂ ವಾಜಪೇಯಿ ಅವರ ಪ್ರತಿಕ್ರಿಯೆಯಿಂದ ಅಪಾರವಾದ ಗೌರವ ಉಂಟಾಗಿತ್ತು.
2004 ಲೋಕಸಭೆ ಚುನಾವಣೆ ಹೊತ್ತಿಗೆಲ್ಲಾ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿಯವರ ನಡುವೆ ಶೀತಲ ಸಮರ ಆರಂಭವಾಗಿತ್ತು. ಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸಬೇಕು ಎಂದ ಪ್ರಶ್ನೆ ಎದುರಾಗಿತ್ತು. ಪಕ್ಷದೊಳಗೇ ವಾಜಪೇಯಿ ಬಣ ಮತ್ತು ಅಡ್ವಾಣಿ ಬಣ ಎಂಬ ಬಿರುಕು ಕಾಣಿಸಿಕೊಂಡಿತ್ತು. ಎದುರಾದ ಸಮಸ್ಯೆಯನ್ನು ವಾಜಪೇಯಿ ಒಂದೇ ಒಂದು ವಾಕ್ಯದಲ್ಲಿ ಬಗೆಹರಿಸಿದ್ದರು. “ಆಯಾಸಗೊಂಡಿಲ್ಲ, ನಿವೃತ್ತಿ ಪಡೆದಿಲ್ಲ. ವಿಜಯಪಥದ ನೇತೃತ್ವ ಅಡ್ವಾಣಿಯವರೇ ವಹಿಸಲಿ,” ವಾಜಪೇಯಿ ಅವರ ಈ ಮಾತು ಪಕ್ಷದ ಎಲ್ಲಾ ನಾಯಕರಿಗೂ ಹಾಗೂ ಆರ್ಎಸ್ಎಸ್ ಮುಖಂಡರಿಗೂ ತಲುಪಿತ್ತು. ಮರು ಕ್ಷಣ ಅಡ್ವಾಣಿ ಪಾಳಯದಲ್ಲಿದ್ದವರೂ ವಾಜಪೇಯಿ ಬೆನ್ನಿಗೆ ನಿಂತರು.
ಇದೇ ರೀತಿಯ ಹಲವು ರಾಜಕೀಯ ಪರಿಸ್ಥಿತಿಗಳನ್ನು ವಾಜಪೇಯಿ ಎದುರಿಸಿದ್ದಾರೆ. ಎಂದು ಎದೆಗುಂದಲಿಲ್ಲ, ಧೃತಿಗೆಡಲಿಲ್ಲ, ತಾಳ್ಮೆಯನ್ನೂ ಕಳೆದುಕೊಳ್ಳಲಿಲ್ಲ. ತಮ್ಮದೇ ದಾಟಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುತ್ತಲೇ ಬಂದರು ವಾಜಪೇಯಿ.
Comments are closed.