ರಾಷ್ಟ್ರೀಯ

ಮಗು ಅತ್ತಿದ್ದಕ್ಕೆ ಭಾರತೀಯ ಕುಟುಂಬದವರನ್ನು ಕೆಳಗಿಳಿಸಿ ವರ್ಣಬೇಧ ತೋರಿ ಅವಮಾನ ಮಾಡಿದ ಬ್ರಿಟಿಷ್ ಏರ್‌ವೇಸ್‌!

Pinterest LinkedIn Tumblr

ಹೊಸದಿಲ್ಲಿ: ‘ಮಗು ಅತ್ತಿದ್ದಕ್ಕೆ ವಿಮಾನದಿಂದ ನಮ್ಮನ್ನು ಕೆಳಗಿಳಿಸಿ ವರ್ಣಬೇಧ ತೋರಿ ಅವಮಾನ ಮಾಡಿದ್ದಾರೆ’ ಎಂದು ಭಾರತೀಯ ಕುಟುಂಬವೊಂದು ಯೂರೋಪ್‌ನ ಬ್ರಿಟಿಷ್‌ ಏರ್‌ವೇಸ್‌ ವಿರುದ್ಧ ಆರೋಪಿಸಿದ್ದಾರೆ.

‘ವಿಮಾನ ಟೇಕ್‌ಆಫ್ ಆಗುವ ವೇಳೆಯಲ್ಲಿ ವಿಮಾನದ ಸಿಬ್ಬಂದಿ ಸೀಟ್‌ಬೆಲ್ಟ್ ಹಾಕಲು ಸೂಚನೆ ನೀಡಿದರು. ಮಗುವಿಗೆ ಸೀಟ್‌ಬೆಲ್ಟ್ ಹಾಕಿದಾಗ ಭಯಬಿದ್ದ ಮಗು ಅಳಲಾರಂಭಿಸಿತು. ಮಗು ಅಳುವುದನ್ನು ನೋಡಿ ವಿಮಾನ ಸಿಬ್ಬಂದಿ ಮಗುವಿಗೆ ಅಳದಂತೆ ಗದರಿಸಿದರು. ಇದರಿಂದ ಭಯಬಿದ್ದ ಮಗು ಮತ್ತಷ್ಟು ಅಳಲಾರಂಭಿಸಿತು. ಮಗು ಅಳುವುದನ್ನು ನೋಡಿ ಹಿಂದಿನ ಸೀಟ್‌ನಲ್ಲಿದ್ದ ಭಾರತೀಯ ಕುಟುಂಬವೊಂದು ಮಗುವಿಗೆ ಬಿಸ್ಕೆಟ್‌ ನೀಡಿ ಸಮಾಧಾನ ಪಡಿಸಲು ಪ್ರಯತ್ನಿಸಿದರು.

ಟರ್ಮಿನಲ್‌ಗೆ ಮರಳಿದ ವಿಮಾನ ಸೆಕ್ಯೂರಿಟಿಯವರನ್ನು ಕರೆಸಿ ಮಗುವಿನ ಕುಟುಂಬದ ಜತೆಗೆ ಮಗುವಿಗೆ ಬಿಸ್ಕೆಟ್‌ ನೀಡಿದ ಕುಟುಂಬವನ್ನೂ ವಿಮಾನದಿಂದ ಕೆಳಗಿಳಿಸಲಾಯಿತು.

ಬ್ರಿಟಿಷ್‌ ಏರ್‌ವೇಸ್‌ ಲಂಡನ್‌-ಬರ್ಲಿನ್‌ ವಿಮಾನ (BA 8495)ದ ಸಿಬ್ಬಂದಿ ಜುಲೈ 23ರಂದು ಭಾರತೀಯ ಎಂಜಿನಿಯರಿಂಗ್‌ ಸೇವೆಯ ಅಧಿಕಾರಿ ಅವರ ಕುಟುಂಬದ ಜತೆ ಈ ರೀತಿ ಅಮಾನವೀಯವಾಗಿ ವರ್ತಿಸಿರುವುದಾಗಿ ಆ ಅಧಿಕಾರಿ ವಿಮಾನಯಾನ ಸಚಿವ ಸುರೇಶ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ‘ಮಗುವಿಗೆ ಸೀಟ್ ಬೆಲ್ಟ್ ಹಾಕಿದಾಗ ಹೆದರಿ ಅಳಲಾರಂಭಿಸಿದಾಗ ನನ್ನ ಹೆಂಡತಿ ಮಗುವನ್ನು ಎತ್ತಿ ಸಮಧಾನ ಪಡಿಸಲು ಪ್ರಯತ್ನಿಸುತ್ತಿದ್ದರು, ಆಗ ಸಿಬ್ಬಂದಿ ಬಂದು ಮಗುವಿಗೆ ಸೀಟ್‌ಗೆ ಮರಳುವಂತೆ ಗದರಿಸಿದರು, ಆಗ ಮಗುವನ್ನು ಮತ್ತೆ ಸೀಟ್‌ನಲ್ಲಿ ಕೂರಿಸಿ ಸೀಟ್‌ ಬೆಲ್ಟ್‌ ಹಾಕಲು ನೋಡಿದಾಗ ಮಗು ಜೋರು ಅಳಲಾರಂಭಿಸಿತು, ಆಗ ಸಿಬ್ಬಂದಿ ‘you bloody keep quiet otherwise you will be thrown out of the window’ ಎಂದು ಬಯ್ದು ನಮ್ಮನ್ನು ಹಾಗೂ ನಮ್ಮ ಜತೆ ಮತ್ತೊಂದು ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದರು.

ಭಾರತೀಯರನ್ನು bloody ಎಂದು ಕರೆದು ಅವಮಾನ ಮಾಡಿದ್ದಾರೆ, ಇದರ ಕುರಿತು ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಬ್ರಿಟಿಷ್ ವಿಮಾನದ ವಕ್ತಾರ ‘ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಯಾವುದೇ ರೀತಿಯ ಬೇಧಭಾವ ಮಾಡುವುದನ್ನು ಸಹಿಸುವುದಿಲ್ಲ, ಗ್ರಾಹಕರ ಜತೆ ಸಂಪರ್ಕದಲ್ಲಿದ್ದೇವೆ, ಸಂಪೂರ್ಣ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.

Comments are closed.