ರಾಷ್ಟ್ರೀಯ

ದೇಹಕ್ಕೆ ಚುಚ್ಚಿಕೊಂಡ ರಾಡ್‌ಗಳನ್ನು ಇಟ್ಟುಕೊಂಡು ಎರಡೂವರೆ ಗಂಟೆಗಳ ಕಾಲ 40 ಕಿ.ಮೀ ಪ್ರಯಾಣ ಮಾಡಿ ಆಸ್ಪತ್ರೆಗೆ ಅಲೆದಾಡಿದ ಕಾರ್ಮಿಕ !

Pinterest LinkedIn Tumblr

ಕೋಲ್ಕತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡ ಕಟ್ಟಲು ಬಳಸುತ್ತಿದ್ದ ಸಾರುವೆಯಿಂದ 10 ಅಡಿ ಕೆಳಗೆ ಬಿದ್ದಿದ್ದಾನೆ. ಇದರಿಂದ 3 ಕಬ್ಬಿಣದ ರಾಡ್‌ಗಳು ಅವನ ದೇಹಕ್ಕೆ ಚುಚ್ಚಿಕೊಂಡಿತ್ತು. ಅಲ್ಲದೆ, ಆಸ್ಪತ್ರೆ ತಲುಪಲು ಎರಡೂವರೆ ಗಂಟೆಗಳ ಕಾಲ 40 ಕಿ.ಮೀ ಪ್ರಯಾಣ ಮಾಡಿದ್ದು, ಸಾವು ಬದುಕಿನ ನಡುವೆ ಆತ ಹೋರಾಡಿರುವ ಘಟನೆ ಘುಟಿಯಾರಿ ಷರೀಫ್ ಎಂಬಲ್ಲಿ ನಡೆದಿದೆ.

ಉದಯ್‌ ಸರ್ದಾರ್ ( 45) ಎಂಬ ಕಾರ್ಮಿಕನಿಗೆ ಈ ರೀತಿ ಅವಘಡಗಳಾಗಿದ್ದು, ಆತನನ್ನು ಘುಟಿಯಾರಿ ಷರೀಫ್‌ನಿಂದ ಆಂಬುಲೆನ್ಸ್‌ನಲ್ಲಿ ಬರೂಯಿಪುರ ಆಸ್ಪತ್ರೆಗೆ ಮೊದಲು ಗೆಳೆಯರು ಕರೆದೊಯ್ದಿದ್ದಾರೆ. ಅಲ್ಲಿಂದ, ಕೋಲ್ಕತದ ಚಿತ್ತರಂಜನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದು, ಒಟ್ಟಾರೆ ಎರಡೂವರೆ ಗಂಟೆಗಳ ಕಾಲ ತನ್ನ ದೇಹದಲ್ಲಿ ರಾಡ್‌ಗಳನ್ನು ಹೊತ್ತುಕೊಂಡೇ ಪ್ರಯಾಣ ಮಾಡಿದ್ದಾನೆ. ಆಸ್ಪತ್ರೆಯಲ್ಲಿ 7 ವೈದ್ಯರ ತಂಡ ಆತನಿಗೆ ಆಪರೇಷನ್‌ ಮಾಡಿದ್ದು, ದೇಹದಿಂದ ಮೂರು ರಾಡ್‌ಗಳನ್ನು ತೆಗೆಯಲು ಮೂರೂವರೆ ಗಂಟೆಗಳ ಕಾಲ ಹರಸಾಹಸ ಪಟ್ಟಿದ್ದಾರೆ. ದೇಹದ ಪ್ರಮುಖ ಅಂಗಗಳಿಗೆ ರಾಡ್‌ ಚುಚ್ಚಿಕೊಳ್ಳದ ಕಾರಣ ಹಾಗೂ ಆಪರೇಷನ್‌ ಯಶಸ್ವಿಯಾದ ಕಾರಣ ಸರ್ದಾರ್‌ ಬದುಕುಳಿದಿದ್ದಾನೆ. ಆದರೆ, ಈಗಲೂ ಆತ ಪ್ರಾಣಾಪಾಯದಿಂದ ಬಚಾವಾಗಿಲ್ಲ ಎನ್ನಲಾಗಿದೆ.

ಒಂದು ಅಂತಸ್ತಿನ ನಿರ್ಮಾಣ ಹಂತದ ಮನೆಗೆ ಪ್ಲಾಸ್ಟರಿಂಗ್ ಮಾಡುವ ವೇಳೆ ಸರ್ದಾರ್ ಸಾರುವೆಯಿಂದ ಜಾರಿ ಐರನ್‌ ರಾಡ್‌ಗಳ ಮೇಲೆ ಬೀಳುವುದನ್ನು ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಮೇಸ್ತ್ರಿಗಳು ನೋಡಿದ್ದಾರೆ. ಈ ವೇಳೆ, ಆತನ ಗಾಯದಿಂದ ರಕ್ತ ತೀವ್ರವಾಗಿ ಸುರಿಯುತ್ತಿದ್ದರೂ ಸರ್ದಾರ್ ಜ್ಞಾನ ತಪ್ಪಿರಲಿಲ್ಲ ಎಂದು ಇತರ ಕಾರ್ಮಿಕರು ಹೇಳಿದ್ದಾರೆ. ಬಳಿಕ, ಸ್ಥಳದಿಂದ ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೂ ದೇಹದ ಎರಡೂ ಕಡೆ ರಾಡ್‌ಗಳು ಚುಚ್ಚಿಕೊಂಡಿದ್ದವು. ಹೀಗಾಗಿ, ಬರೂಯಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆವು. ಆದರೆ, ಆತನನ್ನು ಕೋಲ್ಕತಕ್ಕೆ ಕರೆದೊಯ್ಯಲು ವೈದ್ಯರು ಸಲಹೆ ನೀಡಿದ ಕಾರಣ ಅಲ್ಲಿನ ಆಸ್ಪತ್ರೆಯಲ್ಲಿ ಆತನನ್ನು ಸೇರಿಸಲಾಗಿತ್ತು.

ಇನ್ನು, ಕೋಲ್ಕತದ ವೈದ್ಯರು ಸರ್ದಾರ್ ದೇಹದಲ್ಲಿದ್ದ ರಾಡ್‌ಗಳು ತುಂಬ ದೊಡ್ಡದಾಗಿದ್ದರಿಂದ ವಿದ್ಯುತ್‌ ಗರಗಸದ ನೆರವು ಪಡೆಯಲು ಎಂಜಿನಿಯರ್‌ಗಳನ್ನು ಕೇಳಿದ್ದರು. ಆದರೆ, ಇದರಿಂದ ಆತನ ದೇಹದೊಳಗಿನ ಅಂಗಗಳಿಗೆ ತೊಂದರೆಯಾಗಬಹುದೆಂದು ಈ ಪ್ಲಾನ್‌ ಅನ್ನು ಕೈಬಿಟ್ಟರು. ಬಳಿಕ, ಸಂಜೆ 4 ಗಂಟೆಗೆ ಆಪರೇಷನ್ ಆರಂಭಗೊಂಡಿದ್ದು, ಸಂಜೆ 7.30ರ ವೇಳೆಗೆ ಅಂತ್ಯಗೊಂಡಿದೆ.

ಸರ್ದಾರ್ ದೇಹದೊಳಗಿನ ಕರುಳು, ಯಕೃತ್, ಕಿಡ್ನಿಗೆ ರಾಡ್‌ಗಳಿಂದ ಹೆಚ್ಚಿನ ಗಾಯಗಳಾಗಿಲ್ಲ. ಇದರಿಂದ ಆತ ಅದೃಷ್ಟವಂತ. ಆದರೆ, ವ್ಯಕ್ತಿ ಪ್ರಾಣಾಪಾಯದಿಂದ ಬಚಾವ್ ಆಗುವವರೆಗೆ ಆತ ಆಸ್ಪತ್ರೆಯಲ್ಲೇ ಇರಲಿದ್ದಾನೆ ರಂದು ಕೋಲ್ಕತದ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಸಂದೀಪ್ ಘೋಷ್ ತಿಳಿಸಿದ್ದಾರೆ. ಇನ್ನೊಂದೆಡೆ, ಘಟನೆಯ ಬಗ್ಗೆ ಮಾಹಿತಿ ತಿಳಿದ ಸರ್ದಾರ್ ಪತ್ನಿ ತನ್ನ ನೆರೆಹೊರೆಯವರ ಸಹಾಯದಿಂದ ಕೋಲ್ಕತಕ್ಕೆ ಆಗಮಿಸಿದ್ದಾಳೆ.

Comments are closed.