ರಾಷ್ಟ್ರೀಯ

ಚೆನ್ನೈ ರಾಜಾಜಿ ಹಾಲ್’ನಲ್ಲಿ ಕರುಣಾನಿಧಿ ಪಾರ್ಥೀವ ಶರೀರ; ಗಣ್ಯರಿಂದ ಅಂತಿಮ ನಮನ

Pinterest LinkedIn Tumblr

ಚೆನ್ನೈ: ರಾಷ್ಟ್ರ ರಾಜಕಾರಣದಲ್ಲಿ ಹಲವಾರು ವರ್ಷಗಳ ಕಾಲ ಕಿಂಗ್ ಮೇಕರ್ ಆಗಿ ಪಾತ್ರ ನಿರ್ವಹಿಸಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆಯ ಪರಮೋಚ್ಚ ನಾಯಕ ಮತ್ತುವೇಲು ಕರುಣಾನಿಧಿ ವಿಧಿವಶರಾಗಿದ್ದು, ರಾಜಾಜಿ ಹಾಲ್ ನಲ್ಲಿ ಪಾರ್ಥೀವ ಶರೀರವನ್ನು ಇರಿಸಲಾಗಿದೆ.

11 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿಯವರು ನಿನ್ನೆ ಸಂಜೆ 6.10ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕರುಣಾನಿಧಿಯವರ ಅಗಲಿಕೆ ಅಸಂಖ್ಯಾತ ಡಿಎಂಕೆ ಕಾರ್ಯಕರ್ತರನ್ನು ಶೋಕಸಾಗರದಲ್ಲಿ ದೂಡಿದೆ.

ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದ ಕರುಣಾನಿಧಿಯವರ ಪಾರ್ಥೀವ ಶರೀರವನ್ನು ರಾತ್ರಿ ಅವರ ಮನೆಗೆ ಕೊಂಡೊಯ್ಯಲಾಯಿತು. ಬಳಿಕ ಇಂದು ಮುಂಜಾನೆ 4 ಗಂಟೆ ವೇಳೆಗೆ ದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ರಾಜಾಜಿ ಹಾಲ್’ಗೆ ತರಲಾಗಿದೆ.

ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಹಿನ್ನಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯಬಹುದು ಎಂಬ ಕಾರಣಕ್ಕೆ ತಮಿಳುನಾಡಿನಾದ್ಯಂತ 2 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ನಿನ್ನೆ ಸಂಜೆ 6 ಗಂಟೆಯಿಂದಲೇ ತಮಿಳುನಾಡಿನ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ. ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬುಧವಾರ ಹಾಗೂ ಗುರುವಾರ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಕರುಣಾನಿಧಿ ಅವರಿಗೆ ತೀವ್ರ ರೀತಿಯ ಉಸಿರಕಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಕುತ್ತಿಗೆ ಭಾಗದಲ್ಲಿ ವೈದ್ಯರು ನಳಿಕೆ ಅಳವಡಿಸಿದ್ದರು. ಈ ನಳಿಕೆಯನ್ನು ಬದಲಿಸುವ ಸಲುವಾಗಿ ಜು.18ರಂದು ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿ ಮನೆಗೆ ಮರಳಿದ್ದರು. ಜು.6 ರಂದು ಮೂತ್ರನಾಳ ಸೋಂಕಿನಿಂದಾಗಿ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು.

ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯರು ಕರುಣಾನಿಧಿ ಅವರ ಮನೆಯಲ್ಲಿಯೇ ಬೀಡುಬಿಟ್ಟು ಚಿಕಿತ್ಸೆ ನೀಡಿದ್ದರು. ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತಾದರೂ 2 ದಿನದಲ್ಲಿ ಅವರ ರಕ್ತದ ಒತ್ತಡ ಗಣನೀಯವಾಗಿ ಕುಸಿಯಿತು. ಹೀಗಾಗಿ ಜು.28ರಂದು ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವೈದ್ಯರ ಚಿಕಿತ್ಸೆಗೆ ಆರಂಭದಲ್ಲಿ ಕರುಣಾನಿಧಿ ಅವರು ಸ್ಪಂದಿಸಿದರಾದರೂ, 94 ವರ್ಷದ ದೇಹ ಚಿಕಿತ್ಸೆಗಳನ್ನು ಹೆಚ್ಚು ದಿನ ಸಹಿಸಿಕೊಳ್ಳಲಿಲ್ಲ. ಹೀಗಾಗಿ ನಿಧಾನವಾಗಿ ಕರುಣಾನಿಧಿಯವರ ಅಂಗಾಂಗಗಳು ಕೈಕೊಡಲು ಆರಂಭಿಸಿದವು. ವೈದ್ಯರು ಏನೆಲ್ಲಾ ಪ್ರಯತ್ನ ಮಾಡಿದರೂ ವಿಫಲವಾಯಿತು. ಮಂಗಳವಾರ ಸಂಜೆ 6.10ಕ್ಕೆ ಕರುಣಾನಿಧಿ ಕೊನೆಯುಸಿರೆಳೆದರು.

Comments are closed.