ರಾಷ್ಟ್ರೀಯ

ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಮದ್ರಾಸ್ ಹೈ ಕೋರ್ಟ್ ಗ್ರೀನ್ ಸಿಗ್ನಲ್ ; ತಮಿಳುನಾಡು ಸರ್ಕಾರಕ್ಕೆ ಮುಖಭಂಗ

Pinterest LinkedIn Tumblr

ಚೆನ್ನೈ: ಭಾರಿ ಹೈಡ್ರಾಮಾಕ್ಕೆ ಡಿಎಂಕೆ ಸರ್ವೋಚ್ಚ ನಾಯಕ ಎಂ.ಕರುಣಾನಿಧಿಯವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಮುಖಭಂಗವಾಗಿದ್ದು, ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಮದ್ರಾಸ್ ಹೈ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಅಣ್ಣಾದೊರೈ, ಎಂಜಿಆರ್ ಹಾಗೂ ಜಯಲಲಿತಾ ಸಮಾಧಿಗಳು ಇರುವ ರಾಜಧಾನಿ ಚೆನ್ನೈನ ಮರೀನಾ ಬೀಚ್ ನಲ್ಲಿ ಅಣ್ಣಾದೊರೈ ಸ್ಮಾರಕದ ಪಕ್ಕದಲ್ಲಿಯೇ ಕರುಣಾನಿಧಿಯವರನ್ನು ಮಣ್ಣು ಮಾಡಬೇಕೆಂದು ಡಿಎಂಕೆ ಪಟ್ಟು ಹಿಡಿದಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಹಾಗೂ ಕಾನೂನು ತೊಡಕು ಮುಂದೊಡ್ಡಿ ಮುಖ್ಯಮಂತ್ರಿ ಇ. ಪಳನಿಸ್ವಾಮಿಯವರು ಇದನ್ನು ನಿರಾಕರಿಸಿದ್ದರು.

ಇದರ ಬೆನ್ನಲ್ಲೇ ಡಿಎಂಕೆ ಕಾರ್ಯಕರ್ತರು ಹಿಂಸಾಚಾರ ನಡೆಸಿದರೆ ಎಂಬ ಕಾರಣಕ್ಕೆ ಕಾನೂನು ವಿಭಾಗ ರಾತ್ರೋರಾತ್ರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್’ನ ಹಂಗಾಮಿ ನ್ಯಾಯಮೂರ್ತಿ, ಕನ್ನಡಿಗ ಹುಲುವಾಡಿ ಜಿ.ರಮೇಶ್ ಅವರು ಈ ಅರ್ಜಿಯನ್ನು ರಾತ್ರಿಯೇ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದ್ದರು.

ಇದರಂತೆ ಇಂದು ಬೆಳಿಗ್ಗೆ ನಡೆದ ವಿಚಾರಣೆ ವೇಳೆ ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಸಲ್ಲಿಕೆಯಾಗಿದ್ದ 5 ಅರ್ಜಿಗಳನ್ನು ತಿರಸ್ಕೃತಗೊಂಡಿದ್ದವು. ಬಳಿಕ ತಮಿಳುನಾಡು ಸರ್ಕಾರ ಹಾಗೂ ಡಿಎಂಕೆ ಪರ ವಕೀಲರ ನಡುವೆ ವಾದ ವಿವಾದಗಳನ್ನು ಆಲಿಸಿದ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಇದೀಗ ತೀರ್ಪು ಪ್ರಕಟಿಸಿದ್ದು, ಮರೀನಾ ಬೀಚ್ ನಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟಿದೆ. ನ್ಯಾಯಾಲಯದ ಆದೇಶ ಹಿನ್ನಲೆಯಲ್ಲಿ ಅಣ್ಣಾದೊರೈ ಸಮಾಧಿ ಪಕ್ಕದಲ್ಲಿಯೇ ಕರುಣಾನಿಧಿ ಅಂತ್ಯಕ್ರಿಯೆ ನಡೆಯಲಿದೆ.

ನ್ಯಾಯಾಲಯದ ತೀರ್ಪು ಹೊರಬೀಲುತ್ತಿದ್ದಂತೆಯೇ ಕರುಣಾನಿಧಿ ಪಾರ್ಥೀವ ಶರೀರದ ಬಳಿಯಿದ್ದ ಸ್ಟಾಲಿನ್, ಅಳಗಿರಿ, ಕನಿಮೋಳಿ ಹಾಗೂ ದಯಾನಿಧಿ ಮಾರನ್ ಅವರು ಕಣ್ಣೀರಿಟ್ಟರು. ಈ ನಡುವೆ ನ್ಯಾಯಾಲಯದ ತೀರ್ಪಿನಿಂದ ಡಿಎಂಕೆ ಕಾರ್ಯಕರ್ತರು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Comments are closed.