ರಾಷ್ಟ್ರೀಯ

ಎನ್ಆರ್ ಸಿ ವಿವಾದ: ಅಸ್ಸಾಂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ರಾಜಿನಾಮೆ, ಮಮತಾಗೆ ಮುಜುಗರ

Pinterest LinkedIn Tumblr


ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಕರಡು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಡೆಯನ್ನು ವಿರೋಧಿಸಿ ಅಸ್ಸಾಂನ ಟಿಎಂಸಿ ಅಧ್ಯಕ್ಷ ದಿಪೇನ್ ಪಾಠಕ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಎನ್‌ಆರ್‌ಸಿ ಕರಡು ವರದಿ ಪ್ರಕಟವಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ, ಬಾಂಗ್ಲಾ ಅಕ್ರಮ ನಿವಾಸಿಗಳ ಕುರಿತ ಈ ವರದಿ ರಾಜಕೀಯ ಪ್ರೇರಿತ ಎಂದು ಹೇಳಿದ್ದರು.
ಮಮತಾ ಹೇಳಿಕೆಯನ್ನು ವಿರೋಧಿಸಿರುವ ದಿಪೇನ್, ಎನ್‌ಆರ್‌ಸಿಯಿಂದಾಗಿ ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಯಾಗಿದೆ. ಅವರನ್ನು ರಾಜ್ಯದಿಂದ ಹೊರಗಟ್ಟಲು ಸಾಧ್ಯವಾಗಲಿದೆ. ಆದರೆ ಮಮತಾ ಅವರು ಆ ಬಗ್ಗೆ ಯೋಚಿಸುತ್ತಿಲ್ಲ. ಏಕಾಏಕಿ ಅಸ್ಸಾಂ ಪರವಾಗಿ ಮಾತನಾಡುತ್ತಿದ್ದಾರೆ. ವರದಿಯನ್ನು ಅವರು ವಿರೋಧಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನಾನು ಹುದ್ದೆಯಲ್ಲಿ ನೈತಿಕವಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ರಾಜಿನಾಮೆ ಬಳಿಕ ಪಾಠಕ್ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ನೆರೆ ಬಂದಿದ್ದ ಸಂದರ್ಭದಲ್ಲಿ ಭೇಟಿ ನೀಡುವಂತೆ ಮಮತಾರನ್ನು ಕೇಳಿಕೊಂಡಿದ್ದೆ. ಆದರೆ ಅವರು ಬಂದಿರಲಿಲ್ಲ. ಈಗ ಅಸ್ಸಾಂ ಅನ್ನು ಹರಕೆಯ ಕುರಿಯನ್ನಾಗಿಸಲು ಬಯಸಿದ್ದಾರೆ ಎಂದು ದಿಪೇನ್ ಮಮತಾ ವಿರುದ್ದ ಕಿಡಿಕಾರಿದ್ದಾರೆ.

Comments are closed.