ರಾಷ್ಟ್ರೀಯ

ಪುತ್ರಿ ಪೈಲಟ್​ ಆಗಿದ್ದ ವಿಮಾನದಲ್ಲೇ ಸೇವೆಯ ಕೊನೇ ದಿನ ಮುಗಿಸಿದ ಅಮ್ಮ!

Pinterest LinkedIn Tumblr


ನವದೆಹಲಿ: ಏರ್​ ಇಂಡಿಯಾದಲ್ಲಿ 38 ವರ್ಷ ಸೇವೆ ಸಲ್ಲಿಸಿದ ಪೂಜಾ ಚಿಂಚಾಕರ್​ ಮಂಗಳವಾರ ನಿವೃತ್ತರಾದರು. ಅಂದು ತಮ್ಮ ಮಗಳೇ ಪೈಲಟ್​ ಆಗಿದ್ದ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ತಮ್ಮ ಕೊನೇ ಸೇವೆ ಸಲ್ಲಿಸುವ ಮೂಲಕ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದರು.
ಅಂದು ವಿಮಾನ ಯಾನದ ನಂತರ ಪೂಜಾ ಅವರ ಮಗಳು ಅಶ್ರಿತಾ ಟ್ವೀಟ್​ ಮಾಡಿದ್ದು, ಅಮ್ಮ ನಿವೃತ್ತಿಯಾಗುವ ದಿನ ಆ ವಿಮಾನದಲ್ಲಿ ನಾನು ಪೈಲಟ್​ ಆಗಿರಬೇಕು ಎಂಬುದು ಆಕೆಯ ಕನಸು ಆಗಿತ್ತು. ತುಂಬ ಸಂತೋಷವಾಗಿದೆ. ಇವತ್ತಿಗೆ ಆಕೆ ಏರ್​ಹೋಸ್ಟೆಸ್​ ಆಗಿ 38 ವರ್ಷ ಕಳೆಯುತ್ತದೆ. ಅವರ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.

ಪೂಜಾ ಮಂಗಳವಾರ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಆ ವಿಮಾನ ಲ್ಯಾಂಡ್​ ಆಗುವ 10 ನಿಮಿಷಕ್ಕೂ ಮೊದಲು ಪೂಜಾ ನಿವೃತ್ತರಾಗುತ್ತಿರುವ ವಿಚಾರವನ್ನು ಮೈಕ್​ನಲ್ಲಿ ತಿಳಿಸಲಾಯಿತು. ಪ್ರಯಾಣಿಕರೂ ಸಹ ಚಪ್ಪಾಳೆ ಹೊಡೆದು ಶುಭ ಹಾರೈಸಿದರು.
ಪೂಜಾ ಚಿಂಚಾಕರ್​ ಅವರು ಏರ್​ ಇಂಡಿಯಾದಲ್ಲಿ ವೃತ್ತಿ ಪ್ರಾರಂಭಿಸಿದ್ದು 1980ರಲ್ಲಿ. ಮುಂಬೈ ವಿಮಾನದಲ್ಲಿ 1981ರಿಂದಲೂ ಏರ್​ಹೋಸ್ಟೆಸ್​ ಆಗಿದ್ದರು. ಅವರ ಮಗಳು ಅಶ್ರಿತಾ 2016ರಲ್ಲಿ ಸೇವೆ ಪ್ರಾರಂಭ ಮಾಡಿದ್ದರು. ಅಶ್ರಿತಾ ಮಾಸ್​ ಮೀಡಿಯಾ ವಿದ್ಯಾರ್ಥಿಯಾಗಿದ್ದರು. ಒಮ್ಮೆ ವಿಮಾನಯಾನದಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದ್ದಕ್ಕೆ ಒಪ್ಪಿಕೊಂಡು ಈ ಕೆಲಸಕ್ಕೆ ಬಂದಿದ್ದಾಳೆ ಎಂದು ಪೂಜಾ ಹೇಳಿದ್ದಾರೆ.

ಅಲ್ಲದೆ ಅಶ್ರಿತಾಗೆ ಕೆನಡಾದ ಖಾಸಗಿ ವಿಮಾನ ಸಂಸ್ಥೆಯೊಂದರಲ್ಲಿ ಅವಕಾಶ ಸಿಕ್ಕಿದ್ದರೂ ಆಕೆ ಏರ್​ ಇಂಡಿಯಾವನ್ನೇ ಆಯ್ಕೆ ಮಾಡಿಕೊಂಡಿದ್ದಳು ಎಂದಿದ್ದಾರೆ.
ನನ್ನ ನಿವೃತ್ತಿಯ ದಿನ ನೀನು ಪೈಲಟ್​ ಆಗಿದ್ದ ವಿಮಾನದಲ್ಲೇ ನಾನೂ ಕೆಲಸ ಮಾಡಬೇಕು ಎಂದು ಒಮ್ಮೆ ಪೂಜಾ ಮಗಳ ಬಳಿ ಹೇಳಿಕೊಂಡಿದ್ದರು. ಅದರಂತೆ ಮಂಗಳವಾರ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ಆಶ್ರಿತಾ ಪೈಲಟ್​ ಆಗಿದ್ದರು. ಪೂಜಾ ಏರ್​ಹೋಸ್ಟೆಸ್​ ಆಗಿ ತಮ್ಮ ಕೊನೇ ದಿನವನ್ನು ಮುಗಿಸುವ ಮೂಲಕ ಸ್ಮರಣೀಯವನ್ನಾಗಿಸಿಕೊಂಡರು.

Comments are closed.