ರಾಷ್ಟ್ರೀಯ

ದೇಶಾದ್ಯಂತ ಮುಂದುವರಿಯುತ್ತಿರುವ ಗುಂಪು ಹತ್ಯೆ: ಕಳ್ಳನೆಂದು ಶಂಕಿಸಿ ಥಳಿಸಿ ಹತ್ಯೆ!

Pinterest LinkedIn Tumblr


ಗಾಂಧಿನಗರ: ದೇಶಾದ್ಯಂತ ನಡೆಯುತ್ತಿರುವ ಗುಂಪು ಹತ್ಯೆ ಮುಂದುವರಿದಿದ್ದು, ಗುಜರಾತ್‌ನ ದಾಹೋದ್‌ ಜಿಲ್ಲೆಯಲ್ಲಿ ಕಳ್ಳನೆಂದು ಶಂಕಿಸಿ ಓರ್ವನನ್ನು ಥಳಿಸಿ ಕೊಲ್ಲಲಾಗಿದೆ.

ಜಲೋಧ್‌ನ ಕಾಲೂ ಮಹೋದಿ ಎಂಬಲ್ಲಿ ಘಟನೆ ನಡೆದಿದ್ದು ಹನ್ನೆರಡಕ್ಕೂ ಹೆಚ್ಚು ಮಂದಿಯಿದ್ದ ಗುಂಪು ಇಲ್ಲಿಗೆ ಬಂದಿತ್ತು. ಗುಂಪಿನವರ ಚಲನವನವನ್ನು ಕಂಡು ಅನುಮಾನ ಪಟ್ಟ ಗ್ರಾಮಸ್ಥರು, ಕಳ್ಳರೆಂದು ಶಂಕಿಸಿ ಅವರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಇಬ್ಬರನ್ನು ಹಿಡಿದು ಥಳಿಸಲಾಗಿದ್ದು, ಉಳಿದವರು ಓಡಿ ಹೋಗಿದ್ದಾರೆ. ಅಜ್ಮಲ್‌ ಮೊಹಾನಿಯ ಎಂಬರನ್ನು ಥಳಿಸಿ ಅಮಾನವೀಯವಾಗಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸೆರೆ ಸಿಕ್ಕ ಇಬ್ಬರೂ ಥಳಿತಕ್ಕೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದರು, ಇಬ್ಬರನ್ನೂ ಪೊಲೀಸರು ದಾಹೋದ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಬ್ಬರು ದಾರಿ ಮಧ್ಯೆ ಕೊನೆಯ ಉಸಿರೆಳೆದಿದ್ದು, ಮತ್ತೊಬ್ಬ ಬರ‍್ಹೂ ಮಥೂ ಪಲಾಸ್‌ ಎಂಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಇತ್ತೀಚೆಗೆ ದಾಹೋದ್‌ ಸಬ್‌ ಜೈಲಿನಿಂದ ಬಿಡುಗಡೆ ಹೊಂದಿದ್ದರು. ಅವರ ಮೇಲೆ ವಿವಿಧ ಕ್ರಿಮಿನಲ್‌ ಮೊಕದ್ದಮೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದರು.

ಈ ಹಿಂದೆ ಜೈಲಿನಲ್ಲಿರುವಾಗ ಮೊಹಾನಿಯಾ ನನಗೆ ಪರಿಚಯವಾಗಿದ್ದು, ಅವನನ್ನು ಭೇಟಿ ಮಾಡಲು ನಾನು ಗ್ರಾಮಕ್ಕೆ ಹೋಗಿದ್ದೆ. ಆಗ ನೂರಕ್ಕೂ ಹೆಚ್ಚು ಗ್ರಾಮಸ್ಥರು ಮಾರಕಾಯುಧಗಳಿಂದ ಬೆನ್ನಟ್ಟಿ ಬಂದರು ಎಂದು ಪಲಾಸ್‌ ಹೇಳಿಕೆ ನೀಡಿದ್ದಾನೆ. ಪೊಲೀಸರು ನೂರಕ್ಕೂ ಹೆಚ್ಚು ಗ್ರಾಮಸ್ಥರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ.

Comments are closed.