ರಾಷ್ಟ್ರೀಯ

ರಿಯಲ್‌ ಗನ್‌ ಎಂದು ನಂಬಿಸಲು ರಿಯಲ್‌ ಆಗೇ ಶೂಟ್‌ ಮಾಡಿ ಕೊಂದ!

Pinterest LinkedIn Tumblr


ನವದೆಹಲಿ: ಮಹಿಳೆಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಶಾಹದಾರಾ ದಿಲ್ಶಾದ್ ಗಾರ್ಡನ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ತಿಮರ್‌ಪುರ್‌ನ ಸನ್ನಿ ಎಂಬಾತ ಬಂಧಿತ ಆರೋಪಿ. ಈತ ಪೊಲೀಸರ ವಿಚಾರಣೆ ವೇಳೆ ಉಷಾ ಅಲಿಯಾಶ್‌ ನಿಶ್ತಿ ಎಂಬ ಮಹಿಳೆಗೆ ಶೂಟ್‌ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಸನ್ನಿ ತನ್ನ ಬಳಿಯಿದ್ದ ಆಯುಧವನ್ನು ತೋರಿಸಿದ್ದಾನೆ. ಈ ವೇಳೆ ಮಹಿಳೆ ಅದು ರಿಯಲ್‌ ಗನ್‌ ಎಂದು ಒಪ್ಪದಿದ್ದಕ್ಕೆ ಆಕೆಯನ್ನು ನಂಬಿಸಲು ಸ್ವತಃ ತಾನೇ ಶೂಟ್‌ ಮಾಡಿದ್ದಾಗಿ ತಿಳಿಸಿದ್ದಾನೆ. ಶೂಟ್‌ ಮಾಡಿದ ವೇಳೆ ಗುಂಡು ಮಹಿಳೆಯ ಹೊಟ್ಟೆಗೆ ತಗುಲಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಹಿಳೆಯು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿ ಮೂರ್ನಾಲ್ಕು ಜನರ ಗುಂಪು ಆಕೆಯನ್ನು ಆಸ್ಪತ್ರೆಗೆ ಕರೆತಂದರು. ಬಳಿಕ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಆದರೆ, ಮಹಿಳೆ ಮೃತಪಟ್ಟರು ಎಂದು ಸ್ವಾಮಿ ದಯಾನಂದ ಆಸ್ಪತ್ರೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ಪರೀಕ್ಷೆ ಸಮಯದಲ್ಲಿ ಗಾಯದ ಗುರುತುಗಳು ಅವಳ ಹೊಟ್ಟೆಯಲ್ಲಿ ಕಂಡುಬಂದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಮೃತ ಮಹಿಳೆ ಉಷಾ, ದಿಲ್ಶಾದ್‌ ಗಾರ್ಡನ್‌ನಲ್ಲಿ ವಾಸಿಸುತ್ತಿದ್ದು, ಅಂಗಡಿಯೊಂದನ್ನು ಇಟ್ಟುಕೊಂಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.