ರಾಷ್ಟ್ರೀಯ

ಹೊರಗಿನ ಪ್ರಪಂಚ ಕೆಟ್ಟದಾಗಿದೆಎಂಬ ಕಾರಣ ನೀಡಿ ಮಕ್ಕಳನ್ನು ಮನೆಯೊಳಗೆ ಕೂಡಿಟ್ಟ ದಂಪತಿ

Pinterest LinkedIn Tumblr


ವರಪ್ಪುಳ: ಹೊರಗಿನ ಪ್ರಪಂಚ ಕೆಟ್ಟದಾಗಿದೆ, ಅಲ್ಲಿ ಹೋದರೆ ಮಕ್ಕಳು ಹಾಳಾಗುತ್ತಾರೆ ಎಂಬ ಕಾರಣ ನೀಡಿ ಮೂವರು ಗಂಡು ಮಕ್ಕಳನ್ನು ಕೇರಳದ ದಂಪತಿ ಮನೆಯೊಳಗೆ ಕೂಡಿಹಾಕಿದ್ದಾರೆ. ವರಪ್ಪುಳದ ಪಾಚೊತ್ತಿಲ್ ಅಬ್ದುಲ್ ಲತೀಫ್‌ಗೆ 12, 9 ಮತ್ತು 6 ವರ್ಷದ ಮೂವರು ಗಂಡು ಮಕ್ಕಳಿದ್ದು, ಅವರನ್ನ ಮನೆಯೊಳಗೇ ಕೂಡಿ ಹಾಕಲಾಗಿತ್ತು.

ಲತೀಫ್ ಪತ್ನಿ ರೇಖಾ ಲತೀಫ್ ಕೂಡ ಮಕ್ಕಳನ್ನು ಮನೆಯೊಳಗೇ ಇರಿಸಿಕೊಂಡಿದ್ದಾರೆ. ಕಳೆದ ಸುಮಾರು 10 ವರ್ಷಗಳಿಂದ ಮೂವರು ಮಕ್ಕಳು ಹೊರಗಿನ ಪ್ರಪಂಚವನ್ನೇ ಕಂಡಿಲ್ಲ. ಮಕ್ಕಳಿಗೆ ಲತೀಫ್ ದಂಪತಿ ಮನೆಪಾಠ ಮಾಡುತ್ತಿದ್ದರು. ಅಲ್ಲದೆ ನೆರೆಮನೆಯವರ ಜತೆಗೂ ಯಾವುದೇ ಸಂಪರ್ಕ ಹೊಂದಿರಲಿಲ್ಲ. ದಂಪತಿ ಮಾತ್ರ ಹೊರಗೆ ಹೋಗುತ್ತಿದ್ದು, ಮನೆಯನ್ನು ಲಾಕ್ ಮಾಡಿ ತೆರಳುತ್ತಿದ್ದರು.

ಇದರಿಂದಾಗಿ ಮಕ್ಕಳು ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ರಾತ್ರಿ ವೇಳೆ ಮನೆಯಲ್ಲಿ ದೀಪ ಕೂಡ ಉರಿಸುತ್ತಿರಲಿಲ್ಲ. ಹೀಗಾಗಿ ಮಕ್ಕಳು ಹೊರಜಗತ್ತಿನ ಪರಿವೆಯೇ ಇಲ್ಲದೆ ಜೀವಿಸುತ್ತಿದ್ದರು.

ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿರುವ ಬಗ್ಗೆ ನೆರೆಮನೆಯವರು ಪೊಲೀಸರು ಮತ್ತು ಚೈಲ್ಡ್‌ ಲೈನ್‌ಗೆ ಮಾಹಿತಿ ನೀಡಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೂಡ ಮಾಹಿತಿ ಪಡೆದು, ಪೊಲೀಸರ ಜತೆ ಬಂದು ತನಿಖೆ ನಡೆಸಿದಾಗ ಲತೀಫ್ ಮನೆ ಬಾಗಿಲು ತೆರೆದಿದ್ದಾರೆ. ತನಗೆ ದೈವಿಕ ಶಕ್ತಿಯಿದ್ದು, ಅದರಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ, ಹೊರಪ್ರಪಂಚಕ್ಕೆ ಬಂದರೆ ಮಕ್ಕಳು ಹಾಳಾಗುತ್ತಾರೆ ಎಂದು ಲತೀಫ್ ಈ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.

ಠಾಣೆಯಲ್ಲಿ ಲತೀಫ್ ಹೇಳಿಕೆ ದಾಖಲಿಸಿದ ಬಳಿಕ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗುತ್ತದೆ ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲ ವರದಿ: ಸಮಯಂ ಮಲಯಾಳಂ

Comments are closed.