ರಾಷ್ಟ್ರೀಯ

ಬುರಾರಿ ಸಾಮೂಹಿಕ ಆತ್ಮಹತ್ಯೆ ಮನೆಯಲ್ಲಿ 12ನೇ ಸಾವು!

Pinterest LinkedIn Tumblr


ನವದೆಹಲಿ: ದೆಹಲಿಯ ಬುರಾರಿಯಲ್ಲಿ ಮೋಕ್ಷಕ್ಕಾಗಿ ಸಾಮೂಹಿಕವಾಗಿ ಸಾವಿಗೆ ಶರಣಾದ 11 ಮಂದಿಯ ಮನೆಯಿಂದ ರಕ್ಷಿಸಲ್ಪಟ್ಟಿದ್ದ ಏಕೈಕ ಜೀವ ಭಾನುವಾರ ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದೆ.

ಹೌದು, ಬುರಾರಿಯ ಮನೆಯಿಂದ ರಕ್ಷಿಸಲ್ಪಟ್ಟಿದ್ದ ಏಕೈಕ ಜೀವ ಈ ಟಾಮಿ (6) ಎಂಬ ಹೆಸರಿನ ಶ್ವಾನ ಮಾತ್ರ ಆಗಿತ್ತು. 11 ಮಂದಿಯೂ ನೇಣಿಗೆ ಶರಣಾದ ನಂತರ ಮನೆಯ ಪ್ರಾಂಗಣವನ್ನು ಪೊಲೀಸರು ಶೋಧ ನಡೆಸುವಾಗ ಸರಪಳಿಯಿಂದ ಬಿಗಿದ ಸ್ಥಿತಿಯಲ್ಲಿ ಟಾಮಿ ಪತ್ತೆಯಾಗಿತ್ತು. 108 ಡಿಗ್ರಿಯಷ್ಟು ತೀವ್ರ ಜ್ವರ ಮತ್ತು ಹಸಿವಿನಿಂದ ಬಳಲುತಿದ್ದ ಟಾಮಿಗೆ ನೋಯ್ಡಾ ಬಳಿಯ ಪ್ರಾಣಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಟಾಮಿಯ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿತ್ತು.

ಟಾಮಿಯ ಪಾಲನೆಯ ಜವಾಬ್ದಾರಿಯನ್ನು ಹೌಸ್​ ಆಫ್​ ಸ್ಟ್ರೇ ಅನಿಮಲ್ಸ್​ ಎಂಬ ಪ್ರಾಣಿ ಪಾಲನಾ ಸಂಸ್ಥೆಯ ಮುಖ್ಯಸ್ಥ, ಪ್ರಾಣಿ ಹಕ್ಕುಗಳ ಹೋರಾಟಗಾರ ಸಂಜಯ್​ ಮಹೋಪಾತ್ರ ವಹಿಸಿಕೊಂಡಿದ್ದರು.

“ಟಾಮಿ ಗುಣಮುಖನಾಗಿದ್ದ. ಇಂದು ಬೆಳಗ್ಗೆ ಕೂಡ ಟಾಮಿ ಚಟುವಿಟಕೆಯಿಂದಲೇ ಇದ್ದ. ವಾಕಿಂಗ್​ಗೆ ಕೂಡ ಹೊರಗೆ ಕರೆದೊಯ್ಯಲಾಗಿತ್ತು. ಮರಳಿ ಕರೆತರುವಾಗ ಟಾಮಿ ಕುಸಿದು ಬಿದ್ದ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಟಾಮಿ ಕೊನೆಯುಸಿರೆಳೆಯಿತು,”ಎಂದು ಮಹೋಪಾತ್ರ ತಿಳಿಸಿದ್ದಾರೆ.

“11 ಮಂದಿಯ ಸಾವಿನ ಘಟನೆ ನಂತರ ಸಿಕ್ಕಿದ್ದ ಟಾಮಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಅದರ ಚರ್ಮದ ಅಲರ್ಜಿ ಕೂಡ ವಾಸಿಯಾಗಿತ್ತು. ಟಾಮಿಯನ್ನು ನಮ್ಮ ಕುಟುಂಬದ ಸದಸ್ಯನಂತೆ ನಾವು ಕಾಣುತ್ತಿದ್ದೆವು. ಕುಸಿದು ಬಿದ್ದ ಕೇವಲ 5 ನಿಮಿಷಗಳಲ್ಲೇ ಟಾಮಿ ಕೊನೆಯುಸಿರೆಳೆದ. ನಾವು ಎಷ್ಟೇ ಪ್ರಯತ್ನಿಸಿದರೂ ಅದರ ಜೀವ ಉಳಿಯಲಿಲ್ಲ. ಟಾಮಿ ಅಗಲಿಕೆ ನಮಗೆ ಅತೀವ ದುಃಖ ತರಿಸಿದೆ,” ಎಂದು ಮಹೋಪಾತ್ರ ನೋವಿನಿಂದ ನುಡಿದರು.

ಬುರಾರಿ ಮನೆಯ ಬಳಿ ಅಂದು ಪತ್ತೆಯಾಗಿದ್ದ ಟಾಮಿ ತೀವ್ರ ಆಕ್ರಮಣಕಾರಿಯಾಗಿತ್ತು. ಭಾರಿ ಅರಚಾಟ ಮಾಡುತ್ತಿದ್ದ ಟಾಮಿಯನ್ನು ಸುಧಾರಿಸಿ ವಾಹನದಲ್ಲಿ ಹತ್ತಿಸಿಕೊಳ್ಳುವ ಹೊತ್ತಿಗೆ ಒಂದೂವರೆ ಗಂಟೆಗಳೇ ಬೇಕಾಯಿತು. ಆದರೆ, ನಂತರದಲ್ಲಿ ಟಾಮಿಯಲ್ಲಿ ಅಂಥ ಆಕ್ರಮಣಶೀಲತೆ ಕಂಡಿರಲಿಲ್ಲ ಎಂದೂ ಮಹೋಪಾತ್ರ ತಿಳಿಸಿದ್ದಾರೆ.

ಟಾಮಿ ಸಾವಿಗೀಡಾದ ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು, ಸೋಮವಾರ ಬೆಳಗ್ಗೆ ಅದರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

ಟಾಮಿಯ ನೆನಪಿನಲ್ಲಿ ಹೌಸ್​ ಆಫ್​ ಸ್ಟ್ರೇ ಅನಿಮಲ್ಸ್​ ಸಂಸ್ಥೆಯಲ್ಲಿ ಪ್ರಾಣಿಗಳಿಗಾಗಿ ಒಪಿಡಿಯೊಂದನ್ನು ತೆರಯಲು ನಾವು ನಿರ್ಧರಿಸಿದ್ದೇವೆ ಎಂದು ಮಹೋಪಾತ್ರ ತಿಳಿಸಿದ್ದಾರೆ.

Comments are closed.