ರಾಷ್ಟ್ರೀಯ

ಪ್ರತಿಪಕ್ಷಗಳು ಕೆಸರು ಎರಚಿದಷ್ಟೂ ಕಮಲವೇ ಅರಳುವುದು: ಕಿಸಾನ್‌ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ

Pinterest LinkedIn Tumblr


ಉತ್ತರ ಪ್ರದೇಶದ ಕಿಸಾನ್‌ ರ‍್ಯಾಲಿಯಲ್ಲಿ ರಾಹುಲ್‌ ‘ಅನಪೇಕ್ಷಿತ ಆಲಿಂಗನ’ ಪ್ರಸ್ತಾಪಿಸಿದ ಪ್ರಧಾನಿ

ಶಹಜಹಾನ್‌ಪುರ: ಸಂಸತ್ತಿನಲ್ಲಿ ‘ಅನಪೇಕ್ಷಿತ ಆಲಿಂಗನ’ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು. ಬಿಜೆಪಿ ವಿರುದ್ಧ ಮುಗಿಬೀಳಲು ಹಲವು ಪಕ್ಷಗಳು ಒಟ್ಟಾದಷ್ಟೂ ಮತ್ತಷ್ಟು ‘ಕಮಲ’ ಅರಳಲು ನೆರವಾಗುತ್ತದೆ ಎಂದು ಅವರು ನುಡಿದರು.

‘ಅವರ ಅವಿಶ್ವಾಸ ಗೊತ್ತುವಳಿಗೆ ನಾವು ಕಾರಣ ಕೇಳಿದೆವು. ಆದರೆ ಕಾರಣ ನೀಡಲು ವಿಫಲರಾದ ಅವರು ಅನಪೇಕ್ಷಿತವಾಗಿ ತಬ್ಬಿಕೊಂಡರು’ ಎಂದು ಮೋದಿ ಅವರು ಲೋಕಸಭೆಯಲ್ಲಿ ರಾಹುಲ್ ಆಲಿಂಗನವನ್ನು ಉಲ್ಲೇಖಿಸಿ ನುಡಿದರು.

ಶಹಜಹಾನ್‌ಪುರದಲ್ಲಿ ಕಿಸಾನ್‌ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಅಲ್ಲಿ ಒಂದೇ ದಲ್‌ (ಪಕ್ಷ) ಅಲ್ಲ, ಹಲವು ಪಕ್ಷಗಳು ಒಟ್ಟು ಸೇರಿಕೊಂಡು ಕೆಸರು ಎರಚುತ್ತಿವೆ. ಆ ಕೆಸರು ಮತ್ತಷ್ಟು ಕಮಲಗಳು ಅರಳಲು ನೆರವಾಗುತ್ತದೆ ಅಷ್ಟೇ’ ಎಂದು ಬಣ್ಣಿಸಿದರು.

ಬಿಜೆಪಿ ವಿರುದ್ಧ ಹಲವು ಪಕ್ಷಗಳು ಒಗ್ಗೂಡುತ್ತಿರುವುದು ತಮಗೊಂದು ಸದವಕಾಶ ಎಂದು ಪ್ರಧಾನಿ ತಿಳಿಸಿದರು.

ಪ್ರತಿಪಕ್ಷಗಳ ಮುಖಂಡರು ಬಡವರು, ಯುವಕರು ಮತ್ತು ರೈತರನ್ನು ಮರೆತು ಪ್ರಧಾನಿ ಕುರ್ಚಿಯ ಸುತ್ತ ಓಡುತ್ತಿದ್ದಾರೆ. ಅವರು ಓಡಾಡಿ ಎಬ್ಬಿಸುವ ಕೆಸರಿನಲ್ಲಿ ಕಮಲವೇ ಅರಳುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಲೋಕಸಭೆಯಲ್ಲಿ ನಡೆದ ಘಟನೆ ಬಗ್ಗೆ ನಿಮಗೆ ತೃಪ್ತಿಯಿದೆಯೇ ಎಂದು ರೈತರನ್ನು ನೇರವಾಗಿ ಪ್ರಶ್ನಿಸಿದ ಪ್ರಧಾನಿ, ಪ್ರತಿಪಕ್ಷಗಳು ಪ್ರಧಾನಿ ಕುರ್ಚಿಯ ಮೇಲಷ್ಟೇ ಕಣ್ಣಿಟ್ಟಿವೆ ಎಂದು ಟೀಕಿಸಿದರು.

‘ನಿನ್ನೆ ಲೋಕಸಭೆಯಲ್ಲಿ ನಡೆದಿರುವ ಘಟನೆ ಬಗ್ಗೆ ನಿಮಗೆ ಮೆಚ್ಚುಗೆ ಇದೆಯೇ? ಯಾರು ತಪ್ಪು ಮಾಡಿದ್ದಾರೆ ಎಂದು ನಿಮಗೆ ಅರಿವಾಯಿತೆ? ಅವರು ಬಡವರು ಮತ್ತು ದೇಶದ ಬಗ್ಗೆ ಕಣ್ಣಿಟ್ಟು ನೋಡುತ್ತಿಲ್ಲ. ಅವರ ಕಣ್ಣು ಏನಿದ್ದರೂ ಪ್ರಧಾನಿ ಕುರ್ಚಿಯ ಮೇಲೆ ಮಾತ್ರ’ ಎಂದು ಮೋದಿ ಕುಟುಕಿದರು.

‘ನಾನು ಏನಾದರೂ ತಪ್ಪು ಮಾಡಿದ್ದೇನೆಯೇ? ನಾನು ಬಡವರು ಮತ್ತು ದೇಶದ ಪರ ಕೆಲಸ ಮಾಡುತ್ತಿದ್ದೇನೆ… ಭ್ರಷ್ಟಾಚಾರದ ವಿರುದ್ಧ ಸೆಣಸುತ್ತಿದ್ದೇನೆ. ಅದು ನಾನು ಮಾಡಿದ ಅಪರಾಧವೆ?’ ಎಂದು ಮೋದಿ ಪ್ರಶ್ನಿಸಿದರು.

ಹಿಂದಿನ ಸರಕಾರಗಳು ರೈತರಿಗೆ ನೆರವಾಗುವಂತಹ ಕೆಲಸ ಮಾಡಿಲ್ಲ ಎಂದ ಪ್ರಧಾನಿ, ತಮ್ಮ ಸರಕಾರ ರೈತರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಪಟ್ಟಿ ಮಾಡಿದರು.

ಸಕ್ಕರೆ ಕಾರ್ಖಾನೆಗಳು ಕಾಕಂಬಿಯಿಂದ ಎಥೆನಾಲ್‌ ಮತ್ತು ಕಬ್ಬಿನ ಹಾಲು ಉತ್ಪಾದಿಸಲು ಡಿಸೆಂಬರ್‌ 1ರಿಂದ ಅನುಮತಿ ನೀಡಲಾಗುವುದು. ಈ ಬಗ್ಗೆ ಸರಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ ಎಂದು ಪ್ರಧಾನಿ ತಿಳಿಸಿದರು.

ಕಳೆದ ವಾರ ಅಜಂಗಢ, ಮಿರ್ಜಾಪುರ ಮತ್ತು ವಾರಾಣಸಿಯ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಇಂದು ಶಹಜಹಾನ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿದರು. ಶಹಜಹಾನ್‌ಪುರ ಉತ್ತರ ಪ್ರದೇಶದ ಧಾನ್ಯಗಳ ಅತಿದೊಡ್ಡ ರಖಂ (ಹೋಲ್‌ಸೇಲ್‌) ಮಾರುಕಟ್ಟೆಯಾಗಿದೆ. ರಾಜ್ಯದಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳಿವೆ.

ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಮೂರನೇ ಬಾರಿ ಭೇಟಿ ನೀಡಿದ್ದಾರೆ. ಹರ್ದೋಯ್‌, ಲಖಿಂಪುರ್‌ ಖೇರಿ, ಪಿಲಿಭಿತ್, ಸೀತಾಪುರ್, ಬರೇಲಿ ಮತ್ತು ಬದೌನ್‌ ಜಿಲ್ಲೆಗಳಿಂದ ಸಾವಿರಾರು ರೈತರು ಇಂದಿನ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

Comments are closed.