ರಾಷ್ಟ್ರೀಯ

ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಪಾಯಿಂಟ್ ಬೈ ಪಾಯಿಂಟ್ ತಿರುಗೇಟು ನೀಡಿದ ಪ್ರಧಾನಿ ಮೋದಿ

Pinterest LinkedIn Tumblr

ಹೊಸದಿಲ್ಲಿ: ವಿಕಾಸದ ನಕಾರಾತ್ಮಕತೆಯನ್ನು ದೇಶ ನೋಡುತ್ತಿದೆ. ಅವರ ನಕಾರಾತ್ಮಕ ಭಾವನೆಯನ್ನು ದೇಶ ನೋಡುತ್ತಿದೆ. ಅವರಿಗೆ ಸದನದಲ್ಲಿ ಬಹುಮತವೂ ಇಲ್ಲ. ಹಾಗಿದ್ದರೂ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

30 ವರ್ಷದ ಬಳಿಕ ಪೂರ್ಣ ಬಹುಮತದ ಸರಕಾರ ಬಂದಿದೆ. ವಿಪಕ್ಷಗಳ ಜತೆಗೆ ಇತರ ಕೆಲ ಸದಸ್ಯರು ಸೇರಿಕೊಂಡಿದ್ದಾರೆ. ನಮಗೆ ಬಹುಮತವಿದ್ದರೂ, ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ. ನಮ್ಮ ಸರಕಾರ ಉರುಳಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾವು ಮತ್ತೊಮ್ಮೆ ವಿಶ್ವಾಸ ತೋರ್ಪಡಿಸಬೇಕಾಯಿತು ಎಂದು ಮೋದಿ ಹೇಳಿದ್ದಾರೆ.

ಇದೊಂದು ಉತ್ತಮ ಅವಕಾಶವಾಗಿದ್ದು, ಜನರ ಮುಂದೆ ಮಾತನಾಡಲು, ನಮ್ಮ ವಿಚಾರ ಹೇಳಲು ಸಾಧ್ಯವಾಗಿದೆ. ಭಾಷಣ ಮಾಡಿದರೆ ಸಾಲದು, ಭಾಷಣದಲ್ಲಿ ಹೇಳಿರುವುದನ್ನು ಸಾಬೀತುಪಡಿಸಬೇಕು. ಭಾಷಣದಲ್ಲಿ ಎಷ್ಟೊಂದು ನಕಲಿ ಮತ್ತು ಅಜ್ಞಾನವಿತ್ತು. ಅದನ್ನು ನೀವು ಗಮನಿಸಿದ್ದೀರಿ. ಚರ್ಚೆ ಆರಂಭಕ್ಕೂ ಮೊದಲೇ ಕೆಲವರು ನನ್ನನ್ನು ಎಬ್ಬಿಸಲು ಯತ್ನಿಸಿದ್ದರು. ಒಬ್ಬ ಮೋದಿಯನ್ನು ಸೋಲಿಸಲು ಇಷ್ಟೊಂದು ಮಾಡಬೇಕೇ? ಅವರಲ್ಲಿನ ಅಹಂಕಾರದಿಂದ ಇಷ್ಟೆಲ್ಲ ಆಗುತ್ತಿದೆ ಎಂದು ವಿಪಕ್ಷಗಳತ್ತ ಮೋದಿ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯಿಂದ ಭೂಕಂಪ ಸಂಭವಿಸಿದೆಯೇ? ನಮಗೆ ಜನತೆಯ ಆಶೀರ್ವಾದವಿದೆ. ಆದರೆ ಅವರಿಗೆ ಜನರ ವಿಶ್ವಾಸವಿಲ್ಲ. ನಮ್ಮ ಸರಕಾರ ಯಾವುದೇ ತಾರತಮ್ಯ ಮಾಡದೆ, ಯಾವುದೇ ಕುಟಿಲ ರಾಜಕೀಯ ಮಾಡದೆ, ಭ್ರಷ್ಟಾಚಾರವಿಲ್ಲದೆ ನಾಲ್ಕು ವರ್ಷ ಆಡಳಿತ ನೀಡಿದೆ.

ಅವಿಶ್ವಾಸ ನಿರ್ಣಯ ಗೊತ್ತುವಳಿಗೂ ಮುಂಚೆಯೇ ನನ್ನ ಬಳಿ ಬಂದಿರುವುದನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗುತ್ತದೆ. ವಿಪಕ್ಷಗಳಲ್ಲಿ ಎಷ್ಟೊಂದು ಒಗ್ಗಟ್ಟಿದೆ ಮತ್ತು ಅವರ ಒಗ್ಗಟ್ಟು ವಿಶ್ವಾಸ ಏನಿದೆ ಎಂದು ತಿಳಿಯುತ್ತದೆ. ನೀವು ನಮ್ಮ ಸರಕಾರದ ವಿರುದ್ಧ ಅವಿಶ್ವಾಸ ಮಂಡಿಸುವ ಮೊದಲು, ನಿಮ್ಮ ವಿಶ್ವಾಸ ಬಲಪಡಿಸಿಕೊಳ್ಳಿ ಎಂದು ಪ್ರತಿಪಕ್ಷಗಳ ಒಗ್ಗಟ್ಟನ್ನು ಟೀಕಿಸಿದ್ದಾರೆ.

ಪಿಡಿಪಿ, ಟಿಡಿಪಿ ಸಂಸದರು ಮೋದಿ ಭಾಷಣಕ್ಕೆ ಅಡ್ಡಿಪಡಿಸಿದರೂ, ಮಾತು ಮುಂದುವರಿಸಿದ ಮೋದಿ, ಜಿಎಸ್‌ಟಿ, ನೋಟು ನಿಷೇಧ, ಕಪ್ಪುಹಣದ ವಿರುದ್ಧದ ಕಾನೂನು, ಬೇನಾಮಿ ಆಸ್ತಿ ಕಾನೂನಿಂದ ದೇಶದ ಆರ್ಥಿಕತೆ ಬಲಗೊಂಡಿದೆ. ಆದರೆ ವಿಪಕ್ಷಗಳಿಗೆ ಅದು ಬೇಕಾಗಿಲ್ಲ.

ಮೇಕ್ ಇನ್ ಇಂಡಿಯಾ, ವಿದ್ಯುದೀಕರಣ, ಜನ್ ಧನ್ ಖಾತೆ, ಸಬ್ಸಿಡಿ ನೇರ ವರ್ಗಾವಣೆ, ಫಸಲ್ ಬೀಮಾ, ಜಿಎಸ್‌ಟಿ, ಸ್ವಚ್ಛ ಭಾರತದಂತಹ ವಿವಿಧ ಕಾರ್ಯಕ್ರಮಗಳಿಂದ ದೇಶದ ಜನತೆಗೆ ಸಾಕಷ್ಟು ಪ್ರಯೋಜನವಾಗಿದೆ. ಆದರೆ ವಿಪಕ್ಷಗಳಿಗೆ ಮಾತ್ರ ಅಂತಹ ಯಾವುದೇ ವಿಕಾಸ ಬೇಕಾಗಿಲ್ಲ. ಆರ್‌ಬಿಐ, ಚುನಾವಣಾ ಆಯೋಗ, ಇವಿಎಂ ಸಹಿತ ಯಾವುದರ ಮೇಲೂ ಅವರಿಗೆ ವಿಶ್ವಾಸವಿಲ್ಲ. ಹಾಗೆಯೇ ಅದೇ ನಡೆಯನ್ನಿಟ್ಟುಕೊಂಡು ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತಿದ್ದಾರೆ ಎಂದು ಮೋದಿ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ಭ್ರಷ್ಟಾಚಾರದ ವಿರುದ್ಧದ ಸರಕಾರದ ಹೋರಾಟದಿಂದ ಕೆಲವರಿಗೆ ಕಷ್ಟವುಂಟಾಗಿದೆ. ಡೋಕ್ಲಂ ಬಗ್ಗೆ, ರಫೇಲ್ ಒಪ್ಪಂದ ಬಗ್ಗೆ ಅವರು ವಿವರ ಕೇಳುತ್ತಾರೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಸಾಕ್ಷ್ಯ ಕೇಳುತ್ತಾರೆ. ಹೀಗಿರುವಾಗ ದೇಶದ ಸುರಕ್ಷತೆ, ಭದ್ರತೆ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇದ್ದಂತಿಲ್ಲ. ಅದನ್ನು ಅವರು ಬಯಸುವುದೂ ಇಲ್ಲ ಎನ್ನುವುದು ಜನರಿಗೆ ತಿಳಿದಿದೆ ಎಂದು ಮೋದಿ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಸೈನ್ಯದ ಬಗ್ಗೆ ಅವರಿಗೆ ವಿಶ್ವಾಸವಿಲ್ಲ. ಸೈನಿಕರ ಬಲದ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಸೈನಿಕರ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸಿ. ಅವರಿಗೆ ನೈತಿಕ ಬೆಂಬಲ ನೀಡಿ. ಅವರ ಜತೆ ಸರಕಾರವಿದೆ. ನೀವು ಸೈನಿಕರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ವಿಪಕ್ಷಗಳಿಗೆ ಮೋದಿ ಎಚ್ಚರಿಸಿದ್ದಾರೆ.

ರಾಹುಲ್‌ ಕಣ್ಣು ಹೊಡೆದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ನಾನು ಬಡತಾಯಿಯ ಮಗ, ಕೆಲಸಗಾರನ ಮಗ, ಹೀಗಾಗಿ ನನಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬರುವುದಿಲ್ಲ. ನಿಮ್ಮ ಕಣ್ಣಿನ ಆಟವನ್ನು ದೇಶವೇ ನೋಡಿದೆ ಎಂದು ಹೇಳಿದರು.

ನಾನು ದೇಶದ ಬಡಜನತೆಯ, ಸೇನೆಯ, ಯುವಜನತೆಯ, ರೈತರ ಜತೆದಿದ್ದೇನೆ. ನಮ್ಮ ಸರಕಾರ ಜನರ ಜತೆಗಿದೆ. ಕಾಂಗ್ರೆಸ್ ಸರಕಾರದಂತೆ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಬಡಜನತೆಯ ದುಃಖದಲ್ಲಿ ನಾನು ಪಾಲುದಾರನಾಗಿದ್ದೇನೆ. ನಾವು ಗುತ್ತಿಗೆದಾರರಲ್ಲ, ಬದಲಾಗಿ ಭಾಗಿದಾರ ಎಂದು ಮೋದಿ ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಸರಕಾರವಿದ್ದಾಗ, ಅವರ ಸರಕಾರ ವಿಶ್ವಾಸಮತ ಯಾಚಿಸುವಾಗ, ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಸರಕಾರವಿದ್ದಾಗ ಕಾಂಗ್ರೆಸ್ ಹೇಗೆ ಅವರಿಗೆ ಮೋಸ ಮಾಡಿದೆ ಎನ್ನುವುದು ದೇಶಕ್ಕೆ ತಿಳಿದಿದೆ. ಹಾಗೆಯೇ ಪ್ರಣಬ್ ಮುಖರ್ಜಿಯವರಿಗೆ, ಶರದ್ ಪವಾರ್‌ ಅವರಿಗೆ ಹೇಗೆ ಮೋಸ ಮಾಡಿದ್ದೀರಿ ಎನ್ನುವುದು ಜನರಿಗೆ ತಿಳಿದಿದೆ ಎಂದು ಮೋದಿ ಹಿರಿಯ ನಾಯಕರ ಹೆಸರನ್ನು ಲೋಕಸಭೆಯ ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದರು.

ಅಧಿಕಾರದ ಆಸೆಗಾಗಿ ಜನರನ್ನು, ರಾಜ್ಯಗಳನ್ನು ಇಬ್ಭಾಗ ಮಾಡುವ ಕೆಲಸವನ್ನು ನಾವು ಮಾಡಿಲ್ಲ. ಆದರೆ ಕಾಂಗ್ರೆಸ್ ಅದನ್ನು ಮಾಡಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಇದಕ್ಕೆ ಸೂಕ್ತ ಉದಾಹರಣೆ. ರಾಜ್ಯ ಇಬ್ಭಾಗ ಮಾಡಿ ಜನರನ್ನು ವಿಭಜಿಸಿ, ನೀವು ಅಧಿಕಾರ ಪಡೆದಿರಿ. ಆದರೆ ಜನರ ಕಲ್ಯಾಣದ ಬಗ್ಗೆ ಯೋಚಿಸಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಟೀಕಾಪ್ರಹಾರ ಮಾಡಿದರು.

ಜಿಎಸ್‌ಟಿ ಜಾರಿಗೆ ಸಾಕಷ್ಟು ಅಡೆತಡೆ ಉಂಟಾಗಿತ್ತು. ಜಿಎಸ್‌ಟಿಯಂತಹ ಮಹತ್ವದ ಯೋಜನೆ ಜಾರಿಗೆ ಕಾಂಗ್ರೆಸ್ ಸಹಕಾರ ನೀಡಲಿಲ್ಲ. ನಮ್ಮ ಸರಕಾರ ಬರುವುದಕ್ಕೂ ಮೊದಲೇ ಇದ್ದ ಯುಪಿಎ ಸರಕಾರ ಜಿಎಸ್‌ಟಿ ಬಗ್ಗೆ ಯೋಜನೆ ರೂಪಿಸಿದ್ದರೂ, ಅದನ್ನು ಜಾರಿಗೆ ಚಿಂತನೆ ನಡೆಸಿರಲಿಲ್ಲ. ಇದರಿಂದ ಎನ್‌ಡಿಎ ಸರಕಾರ ಮತ್ತೆ ಜಿಎಸ್‌ಟಿಯನ್ನು ಪುನರ್‌ರೂಪಿಸಿ ಜಾರಿಗೆ ತರಬೇಕಾಯಿತು ಎಂದು ಮೋದಿ ತಿಳಿಸಿದರು.

ಸುಮಾರು ಒಂದೂವರೆ ಗಂಟೆ ಕಾಲ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರಕಾರದ ವಿವಿಧ ಯೋಜನೆಗಳು ಮತ್ತು ನಾಲ್ಕು ವರ್ಷದಲ್ಲಿ ಅದರಿಂದ ಉಂಟಾದ ಪ್ರಯೋಜನಗಳ ಕುರಿತು ವಿವರಿಸಿದರು.

Comments are closed.