ರಾಷ್ಟ್ರೀಯ

ರಸ್ತೆ ಗುತ್ತಿಗೆದಾರರೊಬ್ಬರ ಕಂಪೆನಿ ಮೇಲೆ ಐಟಿ ದಾಳಿ: 160 ಕೋಟಿ ನಗದು, 100 ಕೆಜಿ ಚಿನ್ನ ವಶ

Pinterest LinkedIn Tumblr

ಚೆನ್ನೈ: ತಮಿಳುನಾಡಿನ ರಸ್ತೆ ಗುತ್ತಿಗೆದಾರರೊಬ್ಬರ ಕಂಪೆನಿ ಸೇರಿದಂತೆ ಅನೇಕ ಭಾಗಗಳಲ್ಲಿ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿದ್ದು, ಬರೋಬ್ಬರಿ 160 ಕೋಟಿ ರೂ. ನಗದು ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

ಈ ಮೊತ್ತ ಆದಾಯ ತೆರಿಗೆ ಇಲಾಖೆ ಇದುವರೆಗೂ ನಡೆಸಲಾಗಿದ್ದ ದಾಳಿಯಲ್ಲಿ ಅತ್ಯಂತ ದೊಡ್ಡ ಮೊತ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ಒಪ್ಪಂದ ಮೇರೆಗೆ ರಸ್ತೆಗಳ ಮತ್ತು ಹೆದ್ದಾರಿಯ ನಿರ್ಮಾಣ ಮಾಡುತ್ತಿದ್ದ ಪಾಲುದಾರಿಕೆಯ ಸಂಸ್ಥೆ ಎಸ್‍ಪಿಕೆ ಮತ್ತು ಕಂಪೆನಿಗೆ ಸೇರಿದ ವಿವಿಧ ಭಾಗಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ದಾಳಿಯಲ್ಲಿ ಸುಮಾರು 160 ಕೋಟಿ ರೂ. ನಗದು ಮತ್ತು ಯಾವುದೇ ದಾಖಲೆಗಳಿಲ್ಲದ 100 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ. ಸದ್ಯಕ್ಕೆ ಸೋಮವಾರ ಆರಂಭವಾದ ದಾಳಿ ಇದೂವರೆಗೂ ನಡೆಯುತ್ತಿದೆ. ವಶಪಡಿಸಿಕೊಂಡಿದ್ದ ಹಣ ಮತ್ತು ಚಿನ್ನಕ್ಕೆ ಯಾವುದೇ ಸೂಕ್ತ ದಾಖಲೆ ಇಲ್ಲ ಎಂದು ಹೇಳಲಾಗುತ್ತಿದೆ.

2016ರಲ್ಲಿ ಚೆನ್ನೈನಲ್ಲಿ ಗಣಿಗಾರಿಕೆ ಬ್ಯಾರನ್ ಇಲಾಖೆ ದಾಳಿ ನಡೆಸಿತ್ತು. ಆಗ 110 ಕೋಟಿ ಹಣವನ್ನು ವಶಪಡಿಕೊಳ್ಳಲಾಗಿತ್ತು. ಆದ್ದರಿಂದ ಇದು ಅತಿದೊಡ್ಡ ಮೊತ್ತದ ದಾಳಿಯಾಗಿದೆ. ಚೆನ್ನೈನ ಆದಾಯ ಇಲಾಖೆಯ ತನಿಖೆ ವಿಭಾಗವು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಎಸ್‍ಪಿಕೆ ಸಂಸ್ಥೆ ಮತ್ತು ಅದರ ಇತರೆ ಕಂಪೆನಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ಒಟ್ಟಾರೆ ಕಂಪೆನಿಯ 22 ಜಾಗಗಳಲ್ಲಿ ದಾಳಿ ನಡೆಸಲಾಗಿದೆ. ಇವುಗಳಲ್ಲಿ 17 ಚೆನ್ನೈ, 4 ಅರುಪ್ಪುಕೊಟ್ಟಾಯ್(ವಿರುಧುನಗರ) ಮತ್ತು 1 ವೆಲ್ಲೂರಿನ ಕಟಪಾಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಕ್ ಮಾಡಿದ್ದ ಕಾರುಗಳಲ್ಲಿ ಟ್ರ್ಯಾವೆಲ್ ಬ್ಯಾಗ್ ಗಳಲ್ಲಿ ಹಣ ಪತ್ತೆಯಾಗಿದೆ. ಜೊತೆಗೆ ಚಿನ್ನದ ಬಿಸ್ಕತ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಇನ್ನು ಆದಾಯ ಇಲಾಖೆ ಶೋಧ ಕಾರ್ಯವನ್ನು ಮುಂದುವರೆಸಿದೆ.

Comments are closed.