ರಾಷ್ಟ್ರೀಯ

ಮುಂಬೈ ಮಳೆಯಿಂದ ದಿಲ್ಲಿ ಕಳ್ಳನ ಪತ್ತೆ!

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿ ಮಾಜಿ ಶಾಸಕನ ಮನೆ ದೋಚಿದ್ದ ಖದೀಮನೊಬ್ಬ ವಾಣಿಜ್ಯ ನಗರಿ ಮುಂಬಯಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮುಂಬಯಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಈತ ಹೋಟೆಲ್ ರೂಮ್‌ವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಹೀಗಾಗಿ ಆತನಿದ್ದ ಸ್ಥಳವನ್ನು ಟ್ರ್ಯಾಕ್ ಮಾಡಲು ಪೊಲೀಸರಿಗೆ ಸಾಕಷ್ಟು ಸಮಯ ಸಿಕ್ಕಂತಾಯಿತು.

ಆರೋಪಿ ವಿಜಯ್ ಯಾದವ್ (30) ಮಾಜಿ ಶಾಸಕ ರಾಮೇಶ್ವರ್ ಚೌರಾಸಿಯಾ ಅವರಲ್ಲಿ ಕೆಲಸಕ್ಕಿದ್ದು, ಉಂಡ ಮನೆಗೆ ಕನ್ನ ಬಗೆದು ಪರಾರಿಯಾಗಿದ್ದ. ಆತ 50 ಸಾವಿರ ರೂಪಾಯಿ ಹಾಗೂ 4 ಲಕ್ಷ ಬೆಲೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ ಎಂದು ಜುಲೈ 6ರಂದು ಚೌರಾಸಿಯಾ ದೂರು ದಾಖಲಿಸಿದ್ದರು.

ಘಟನೆ ಬಳಿಕ ಆರೋಪಿಯ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಹೀಗಾಗಿ ಕುಟುಂಬಸ್ಥರಿಗೆ ಕರೆ ಮಾಡಲು ಬೇರೆ ಫೋನ್ ಬಳಸುತ್ತಿರಬಹುದು ಎಂದು ಪೊಲೀಸರು ಊಹಿಸಿದರು. ಆತನ ಅತ್ತೆ ಹಾಗೂ ಸಹೋದರನಿಗೆ ಮುಂಬಯಿನಿಂದ ಪದೇ ಪದೇ ಕರೆ ಬರುತ್ತಿರುವುದನ್ನು ಕಂಡುಕೊಂಡ ಪೊಲೀಸರು, ಆ ಮೊಬೈಲ್ ಸಂಖ್ಯೆ ಲೊಕೇಷನ್ ಆಧಾರದ ಮೇಲೆ ಆರೋಪಿ ಇರುವ ಸ್ಥಳ ಪತ್ತೆ ಮಾಡಿ ಬಂಧಿಸಿದರು.

ಆತ ಕದ್ದ ಹಣ ಮತ್ತು ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Comments are closed.