ರಾಷ್ಟ್ರೀಯ

ಮಹಿಳೆಯಿಂದ ಪುರುಷರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಜಾಗೃತಿ

Pinterest LinkedIn Tumblr


ಜೈಪುರ: ಸಾಮಾನ್ಯವಾಗಿ ಕುಟುಂಬ ಯೋಜನೆ ಕೈಗೊಳ್ಳುವ ದಂಪತಿ ಪೈಕಿ ಮಹಿಳೆಯರೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಜಾಸ್ತಿ. ಆದರೆ ರಾಜಸ್ಥಾನದ ಜೈಪುರದಲ್ಲಿ ಮಾತ್ರ ಲಲಿತಾ ರಾಥಿ ಎಂಬಾಕೆ 25 ಮಂದಿ ಪುರುಷರಿಗೆ ಶಸ್ತ್ರಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ ಯಶಸ್ವಿಯಾಗಿದ್ದಾಳೆ.

ಲಲಿತಾ ರಾಥಿ ಸರಕಾರದ ಆರೋಗ್ಯ ಇಲಾಖೆಯಿಂದ ನೇಮಕವಾದ ಸಮುದಾಯ ಆರೋಗ್ಯ ಕಾರ್ಯಕರ್ತೆಯಾಗಿದ್ದು, ಬಾರನ್ ಜಿಲ್ಲೆಯಲ್ಲಿ ಪುರುಷರಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಅರಿವು ಮೂಡಿಸುತ್ತಿದ್ದಾಳೆ. ಸ್ವತಃ ತನ್ನ ಪತಿಗೆ ಆಕೆ ಈ ಬಗ್ಗೆ ಅರಿವು ಮೂಡಿಸಿದ್ದು, ನಂತರ ಆಕೆಯ ಪತಿ ಕೂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಬಾರನ್ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 198 ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರ ಪೈಕಿ 25 ಮಂದಿಗೆ ಲಲಿತಾ ಅವರೇ ಜಾಗೃತಿ ಮೂಡಿಸಿ ಮನವೊಲಿಸಿದ್ದಾರೆ.

ಬಾರನ್‌ನಲ್ಲಿ ಬಹುತೇಕ ಬುಡಕಟ್ಟು ಜನಾಂಗದವರೇ ಇದ್ದು, ಕುಟುಂಬ ಯೋಜನೆ ಬಗ್ಗೆ ಹೆಚ್ಚಿನ ಅರಿವು ಹೊಂದಿಲ್ಲ. ಅಲ್ಲದೆ ಶಸ್ತ್ರಚಿಕಿತ್ಸೆ ಬಗ್ಗೆ ಅವರು ಹೊಂದಿರುವ ಕೆಲವೊಂದು ನಂಬಿಕೆಗಳು ಕೂಡ ಕುಟುಂಬ ಯೋಜನೆ ಪಾಲಿಸದಂತೆ ಮಾಡಿವೆ. ಆದರೆ ಲಲಿತಾರಂತಹ ಆರೋಗ್ಯ ಕಾರ್ಯಕರ್ತೆಯರು ಜಾಗೃತಿ ಮೂಡಿಸಿ, ಜನರಲ್ಲಿ ಕುಟುಂಬ ಯೋಜನೆಯ ಮಹತ್ವದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಕಾರ್ಯಕ್ರಮವೊಂದರಲ್ಲಿ ಲಲಿತಾ ಅವರನ್ನು ಗುರುತಿಸಿ 5000 ರೂ. ನಗದು ಮತ್ತು ಟ್ರೋಫಿ ನೀಡಿ ಗೌರವಿಸಿದೆ.

Comments are closed.