ರಾಷ್ಟ್ರೀಯ

ವೇಶ್ಯಾವಾಟಿಕೆ ದಂಧೆಕೋರರಿಂದ ಬಳಸಿದ ಕಾಂಡೋಮ್‌ಗಳ ಮೂಲಕ ಬ್ಲ್ಯಾಕ್‌ಮೇಲ್

Pinterest LinkedIn Tumblr


ಭೋಪಾಲ್: ಮಧ್ಯಪ್ರದೇಶದ ಶಹಪುರದಲ್ಲಿ ಹೈ ಪ್ರೊಫೈಲ್ ಸೆಕ್ಸ್ ರ‍್ಯಾಕೆಟ್ ಅನ್ನು ಪತ್ತೆ ಹಚ್ಚಿರುವುದಾಗಿ ಪೊಲೀಸರ ಜಂಟಿ ತಂಡ ಹೇಳಿಕೊಂಡಿದೆ. ದಂಧೆಯಲ್ಲಿ ತೊಡಗಿದ್ದ 22 ವರ್ಷ ವಯಸ್ಸಿನ ಯುವತಿ, ದಂಧೆಯ ಕಿಂಗ್‌ಪಿನ್ ಎನ್ನಲಾದ 32 ವರ್ಷ ವಯಸ್ಸಿನ ದಿಲೀಪ್ ಗೋಯಲ್ ಅಲಿಯಾಸ್ ಗೋಲ್ಡಿ ಹಾಗೂ ಸ್ಥಳೀಯ ಏಜೆಂಟ್ ಎನ್ನಲಾದ 28 ವರ್ಷ ವಯಸ್ಸಿನ ಅರ್ಜುನ್ ಪಾಲ್‌ ಎಂಬಾತರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಎಸ್‌ಪಿ ರಾಹುಲ್ ಲೋಧಾ ತಿಳಿಸಿದ್ದಾರೆ.

ನಿರ್ಜನ ತಾಣವೊಂದರಲ್ಲಿ ಕಾರು ನಿಲ್ಲಿಸಿದ್ದ ವೇಳೆ ಶಹಪುರ ಪೊಲೀಸ್ ಹಾಗೂ ಮಹಿಳಾ ಠಾಣೆಯ ಜಂಟಿ ತಂಡ ಈ ಮೂವರನ್ನು ಬಂಧಿಸಿದ್ದು, ಗೋಲ್ಡಿ ಹಾಗೂ ಅರ್ಜುನ್ ಇಬ್ಬರೂ ಭೋಪಾಲ್‌ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನ ರೈಫಲ್ಸ್‌ನಲ್ಲಿ 2003 ರಿಂದ 2012ರವರೆಗೆ ರೈಫಲ್‌ಮೆನ್‌ ಆಗಿ ಗೋಲ್ಡಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಭೋಪಾಲ್‌ನಲ್ಲಿ ಅರ್ಧ ಡಜನ್‌ಗೂ ಅಧಿಕ ಏಜೆಂಟರನ್ನೂ ಈತ ಹೊಂದಿದ್ದ. ಅಲ್ಲದೆ, ಆನ್‌ಲೈನ್‌ ಎಸ್ಕಾರ್ಟ್ ಸೇವೆ ಜಾಹೀರಾತಿನ ಮೂಲಕ ಏಜೆಂಟರು ಗಿರಾಕಿಗಳನ್ನು ಸೆಳೆಯುತ್ತಿದ್ದರು. ಅಲ್ಲದೆ, ವಾಟ್ಸಾಪ್‌ ಗ್ರೂಪ್‌ಗಳ ಮೂಲಕ ಏಜೆಂಟರು ದಂಧೆಯಲ್ಲಿ ತೊಡಗಿದ್ದ ಹುಡುಗಿಯರ ಮಾಹಿತಿ ಹಾಗೂ ಫೋಟೋಗಳನ್ನು ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಜತೆಗೆ ಒಂದು ವಾರದಿಂದ 10 ದಿನಗಳ ಕಾಲ ಹುಡುಗಿಯರನ್ನು ಭೋಪಾಲ್‌ನಲ್ಲಿ ಇರಿಸಿಕೊಳ್ಳಲಾಗುತ್ತಿತ್ತು. ಹಾಗೂ, ಪ್ರತಿ ದಿನದ ಆಧಾರದಲ್ಲಿ ಅಥವಾ ಗಿರಾಕಿಗಳ ಆಧಾರದಲ್ಲಿ ಅವರಿಗೆ ಗೋಲ್ಡಿ ಹಣ ನೀಡುತ್ತಿದ್ದ ಎನ್ನಲಾಗಿದೆ.

ಇನ್ನು, ರೈಫಲ್‌ಮೆನ್ ಆಗಿದ್ದ ಗೋಲ್ಡಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ. ಜತೆಗೆ ಕಳೆದ 4 ವರ್ಷಗಳಿಂದ ಮಾಂಸ ದಂಧೆಯಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ದೆಹಲಿ, ಮುಂಬಯಿ, ಬಿಹಾರದಿಂದ ಭೋಪಾಲ್‌ಗೆ ಕಾಂಟ್ರ್ಯಾಕ್ಟ್‌ ಆಧಾರದಲ್ಲಿ ಸ್ಥಳೀಯ ಏಜೆಂಟ್‌ಗಳಿಗೆ ಗೋಲ್ಡಿ ಹುಡುಗಿಯರನ್ನು ರವಾನಿಸುತ್ತಿದ್ದ. ಇನ್ನೊಂದೆಡೆ, ಗೋಲ್ಡಿಯ ಮನೆಯ ಸಹಾಯಕ ಹಾಗೂ ಏಜೆಂಟ್ ಆಗಿದ್ದ ಅರ್ಜುನ್ ಭೋಪಾಲ್‌ನಲ್ಲಿ ಹೊಸ ಗಿರಾಕಿಗಳನ್ನು ಹುಡುಕುತ್ತಿದ್ದ ಎನ್ನಲಾಗಿದೆ. ಸ್ಥಳೀಯ ಪ್ರಭಾವಶಾಲಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ದಂಧೆಕೋರರು 8 ರಿಂದ 10 ಸಾವಿರ ರೂ. ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.

ದಾಳಿ ವೇಳೆ ಪೊಲೀಸರು ಸುಮಾರು 50 ಬಳಸಿದ್ದ ಕಾಂಡೋಮ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನಿಟ್ಟುಕೊಂಡು ಗ್ರಾಹಕರಿಗೆ ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ, ದೇಶದ ಹಲವು ವೇಶ್ಯಾವಾಟಿಕೆ ದಂಧೆಕೋರರ ಜತೆಗೆ ಸಂಪರ್ಕ ಹೊಂದಿದ್ದೆ ಎಂದು ಗೋಲ್ಡಿ ಬಾಯ್ಬಿಟ್ಟಿದ್ದಾನೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ನು, ಜೂನ್ 27 ರಂದು ಶಹಪುರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಯಲಾಗಿದ್ದ ವೇಶ್ಯಾವಾಟಿಕೆ ದಂಧೆಯಲ್ಲೂ ಇವರ ಕೈವಾಡವಿದೆ ಎಂದು ಮಧ್ಯ ಪ್ರದೇಶದ ಪೊಲೀಸ್ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Comments are closed.