ರಾಷ್ಟ್ರೀಯ

ತಾಜ್ ಮಹಲ್ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ: ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ವಿಶ್ವ ಪ್ರಸಿದ್ಧ ಪಾರಂಪರಿಕ ತಾಣ ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.

ತಾಜ್ ಮಹಲ್ ಸಂರಕ್ಷಿಸುವಲ್ಲಿ ಕೇಂದ್ರಸರ್ಕಾರ ಹಾಗೂ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ನಿರ್ಲಕ್ಷ್ಯ ವಹಿಸಿವೆ ಎಂದು ಕಿಡಿಕಾರಿದ ಸುಪ್ರೀಂಕೋರ್ಟ್, ತಾಜ್ ಮಹಲ್ ಗತವೈಭವವನ್ನು ಮರುಸ್ಥಾಪಿಸಿ ಇಲ್ಲವೇ ಅದನ್ನು ಕೆಡವಿ ಎಂದು ಕೇಂದ್ರಸರ್ಕಾರಕ್ಕೆ ತಾಕೀತು ಮಾಡಿದೆ.

ಐಪೆಲ್ ಟವರ್ ಗಿಂತಲೂ ತಾಜ್ ಮಹಲ್ ಸುಂದರವಾಗಿದೆ. ಟಿವಿ ಟವರ್ ನಂತಿರುವ ಐಪೆಲ್ ಟವರ್ ನ್ನು 80 ಮಿಲಿಯನ್ ಪ್ರವಾಸಿಗರು ವೀಕ್ಷಿಸುತ್ತಾರೆ. ಆದರೆ, ನಮ್ಮ ತಾಜ್ ಮಹಲ್ ಅದಕ್ಕಿಂತಲೂ ಸುಂದರವಾಗಿದೆ . ಆದರೆ,ಕೇಂದ್ರಸರ್ಕಾರದ ನಿರಾಸಕ್ತಿಯಿಂದಾಗಿ ದೇಶಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ನ್ಯಾಯಾಲಯ ಕಿಡಿಕಾರಿದೆ.

ಮೊಘಲ್ ಚಕ್ರವರ್ತಿ ಷಹಜಾನ್ ತನ್ನ ಮಡದಿಗೋಸ್ಕರ್ ಕಟ್ಟಿಸಿದ ತಾಜ್ ಮಹಲ್ ಸಂರಕ್ಷಣೆಗಾಗಿ ದೃಷ್ಟಿ ದಾಖಲೆ ಕರಡು ರೂಪಿಸುವಲ್ಲಿ ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ಸುಪ್ರೀಂಕೋರ್ಟ್ ಗೆ ಹೇಳಿಕೆ ನೀಡಿತ್ತು. ಆದರೆ. ಅದನ್ನು ನ್ಯಾಯಾಧೀಶರ ಮುಂದೆ ಮಂಡಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾದ್ದರಿಂದ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಲುಷಿತ ಅನಿಲದಿಂದಾಗಿ ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದಲ್ಲಿನ ಪರಿಸರ ಹಾಳಾಗಿದ್ದು, ಇದನ್ನು ರಕ್ಷಿಸಬೇಕೆಂದು ಪರಿಸರ ತಜ್ಞ ಎಂ. ಜಿ. ಮೆಹ್ತಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ. ಬಿ. ಲೊಕುರ್ ಮತ್ತು ದೀಪಕ್ ಗುಪ್ತಾ ಅವರಿದ್ದ ದ್ವಿಸದಸ್ಯ ಪೀಠ, ತಾಜ್ ಮಹಲ್ ರಕ್ಷಣೆ ಕುರಿತ ಸಂಸದೀಯ ಸಮಿತಿ ವರದಿ ಹೊರತುಪಡಿಸಿ ಕೇಂದ್ರಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿತು.

ತಾಜ್ ಮಹಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಯುಮಾಲಿನ್ಯ ಪ್ರಮಾಣ ಕುರಿತು ವರದಿ ನೀಡಲು ಕಾನ್ಪುರದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಹೇಳಲಾಗಿದ್ದು, ಇನ್ನೂ ನಾಲ್ಕು ತಿಂಗಳೊಳಗೆ ವರದಿ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

ಅಲ್ಲದೇ ವಾಯುಮಾಲಿನ್ಯದಿಂದ ರಕ್ಷಣೆಗಾಗಿ ಸಲಹೆ ನೀಡಲು ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಜುಲೈ 31 ರಿಂದ ಈ ವಿಷಯದ ವಿಚಾರಣೆಯನ್ನು ದಿನದಿಂದ ದಿನಕ್ಕೆ ನಡೆಸುವುದಾಗಿ ಸುಪ್ರೀಂಕೋರ್ಟ್ ಪೀಠ ಹೇಳಿಕೆ ನೀಡಿದೆ.

Comments are closed.