ರಾಷ್ಟ್ರೀಯ

ಇಲ್ಲಿನ ಹೆಣ್ಣು ಮಕ್ಕಳಿಗೆ ವ್ಯಭಿಚಾರವೇ ವೃತ್ತಿ!

Pinterest LinkedIn Tumblr

| ಸುನೀಲ ಬಾರ್ಕರ್

ಪರಂಪರಾಗತವಾಗಿ ಬಂದ ಮೌಲ್ಯವೆಂಬಂತೆ ವೇಶ್ಯಾವೃತ್ತಿಯನ್ನು ಅತ್ಯಂತ ಸಹಜವಾಗಿ ಸ್ವೀಕರಿಸುವ ಸಮುದಾಯ, ಪಂಗಡಗಳು ನಮ್ಮ ದೇಶದಲ್ಲಿವೆ. ಅವುಗಳಲ್ಲೊಂದು ಬಂಚರಾ. ವೇಶ್ಯಾವೃತ್ತಿಯಿಂದಲೇ ಮನೆಯವರೆಲ್ಲರ ಹೊಟ್ಟೆ ಹೊರೆಯುವ, ಅವರ ಅಗತ್ಯಗಳನ್ನು ಪೂರೈಸುವ ಮಧ್ಯಪ್ರದೇಶದ ಇಂಥ ಕೆಲವು ಸಮುದಾಯಗಳ ಹೆಣ್ಣುಮಕ್ಕಳ ಬದುಕು ನಿಜಕ್ಕೂ ಬರ್ಬರ. ಯಾವುದೇ ವ್ಯವಸ್ಥೆಗೆ ನಿಲುಕದ ಈ ಸಮುದಾಯಗಳ ಯುವಕ-ಯುವತಿಯರಿಗೆ ಉದ್ಯೋಗ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮಾಡಿದರೆ ಮಾತ್ರ ಈ ಸಮಸ್ಯೆ ಬಗೆಹರಿಯಬಹುದು. ಆದರೆ, ಅಷ್ಟೆಲ್ಲ ಬದಲಾವಣೆ ಮಾಡುವವರ್ಯಾರು?

ಇಲ್ಲಿ ಮನೆಯ ಹಿರಿಮಗಳು ಇಡೀ ಕುಟುಂಬದ ಹೊಟ್ಟೆ ಹೊರೆಯುತ್ತಾಳೆ. ಕುಟುಂಬ ಪೊರೆಯುವ ಹೆಣ್ಣುಮಕ್ಕಳು ದೇಶದೆಲ್ಲೆಡೆ ಇರುವಾಗ ಅದರಲ್ಲೇನೂ ವಿಶೇಷವಿಲ್ಲ ಎನಿಸಬಹುದು. ಆದರೆ, ಈ ಹೆಣ್ಣುಮಕ್ಕಳು ಕುಟುಂಬವನ್ನು ಸಲಹುವುದು ವೇಶ್ಯಾವೃತ್ತಿ ನಡೆಸುವ ಮೂಲಕ. ಮನೆಯ ಗಂಡುಮಕ್ಕಳು ಉಂಡಾಡಿಗುಂಡರಂತೆ ಓಡಾಡಿಕೊಂಡಿದ್ದರೆ ಇವರು ಮಾತ್ರ ತಮ್ಮ ದೇಹವನ್ನು ಮಾರಾಟಕ್ಕಿಟ್ಟು ಸಂಸಾರದ ಹೊಟ್ಟೆಗೆ ಹಿಟ್ಟು ತುಂಬಿಸುತ್ತಾರೆ. ಇದು ಮಧ್ಯಪ್ರದೇಶದ ಬಂಚರಾ ಸಮುದಾಯ.

ಮಧ್ಯಪ್ರದೇಶದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಬಂಚರಾ ಕೂಡ ಒಂದು. ಪಶ್ಚಿಮ ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಜನಾಂಗದವರು ವಿಶೇಷವಾಗಿ ನೀಮುಚ್-ರತ್ಲಾಂ ಹೆದ್ದಾರಿ ಪ್ರದೇಶದಲ್ಲಿ ಕೇಂದ್ರಿತವಾಗಿದ್ದಾರೆ. ಕಡುಬಡತನದಲ್ಲೇ ಜೀವನ ನಡೆಸುವ ಇವರಲ್ಲಿ ವಿಚಿತ್ರ ಪದ್ಧತಿಯೊಂದಿದೆ. ಕುಟುಂಬದ ಹಿರಿಯ ಹೆಣ್ಣುಮಗಳು ಜೀವನೋಪಾಯಕ್ಕಾಗಿ ವೇಶ್ಯಾವೃತ್ತಿಗಿಳಿಯುತ್ತಾಳೆ! ಇದರಲ್ಲಿ ಕುಟುಂಬಕ್ಕೆ ಮುಜುಗರವೇನೂ ಇಲ್ಲ ಎಂಬುದು ಇನ್ನೂ ಆಶ್ಚರ್ಯಕರ!

ಮನೆಗೆ ಬರುವ ಗ್ರಾಹಕರಿಗೆಂದೇ ಅತಿಥಿ ಕೊಠಡಿಯೊಂದಿರುತ್ತದೆ. ಗ್ರಾಹಕ ಬಂದ ತಕ್ಷಣವೇ ಮನೆಯವರೆಲ್ಲ ಆತನಿಗೆ ಕೊಠಡಿ ಖಾಲಿ ಮಾಡಿ ಸಹಕರಿಸುತ್ತಾರೆ! ಇವರನ್ನು ಹುಡುಕಿಕೊಂಡು ಬರುವವರು ಹೆಚ್ಚಿನ ಪಕ್ಷ ಈ ರಸ್ತೆಯಲ್ಲಿ ಓಡಾಡುವ ಡ್ರೖೆವರ್​ಗಳಾದರೂ ಕೆಲವೊಮ್ಮೆ ಶ್ರೀಮಂತರೂ ಬರುತ್ತಾರೆ. ಈ ವ್ಯಾಪಾರದಿಂದ ಕುಟುಂಬಕ್ಕೆ ಅನ್ನ ದುಡಿದು ಹಾಕುವ ಮನೆಯ ಹಿರಿಯಕ್ಕನಿಗೆ ಕುಟುಂಬ ಸದಸ್ಯರಿಂದ ಗೌರವವೂ ಸಿಗುತ್ತದೆ. ಇವರನ್ನು ಸ್ಥಳೀಯವಾಗಿ ಖಿಲವಾಡಿ (ಆಟಗಾರ್ತಿ) ಎಂದು ಕರೆಯುತ್ತಾರೆ. ಬಂಚರಾಗಳ ಪದ್ಧತಿಯಂತೆ ಖಿಲವಾಡಿಗಳು ತಮ್ಮ ಪಂಗಡದ ಯಾರ ಜತೆಗೂ ಮದುವೆಯಾಗುವಂತಿಲ್ಲ. ಆದರೆ, ಪಂಚಾಯತಿಯ ಅನುಮತಿಯೊಂದಿಗೆ ಬೇರೆ ಪಂಗಡದ ಹುಡುಗನ ಜತೆಗೆ ಮದುವೆಯಾಗಬಹುದು. ನಂತರ ಆಕೆ ತನ್ನ ವೇಶ್ಯಾವೃತ್ತಿ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಮನೆಯವರು ಆಕೆಯ ಮದುವೆ ಮಾಡಲು ಮುಂದಾಗುವುದಿಲ್ಲ! ಏಕೆಂದರೆ, ಮನೆಯವರೆಲ್ಲರ ಹೊಟ್ಟೆಪಾಡು ಆಕೆಯನ್ನೇ ಅವಲಂಬಿಸಿರುತ್ತದೆ.

ಸೇಡು ತೀರಿಸಿಕೊಳ್ಳಲು…

ಕೇವಲ ಮಧ್ಯಪ್ರದೇಶದಲ್ಲಷ್ಟೇ ಕಂಡುಬರುವ ಬಂಚರಾಗಳು ಮೂಲತಃ ರಾಜಸ್ಥಾನದವರೆಂದು ಹೇಳಲಾಗುತ್ತದೆ. ಗುಜರಾತಿ ಮತ್ತು ಮಾರವಾಡಿ ಮಿಶ್ರಿತ ಭಾಷೆ ಮಾತನಾಡುವ ಇವರ ಮೂಲದ ಬಗ್ಗೆ ಒಂದು ಐತಿಹ್ಯವಿದೆ. ಸುಮಾರು ಐನೂರು ವರ್ಷಗಳ ಹಿಂದೆ ರಾಜಸ್ಥಾನದ ಹಳ್ಳಿಯೊಂದರಲ್ಲಿ ಕಂಜರಾ ಪಂಗಡಕ್ಕೆ ಸೇರಿದ ಸುಂದರ ಯುವತಿಯನ್ನು ಮೇವಾಡದ ರಾಜನೊಬ್ಬ ಅಪಹರಿಸುತ್ತಾನೆ. ಆಕೆಯ ಬಿಡುಗಡೆಗಾಗಿ ಊರವರು ಮಾಡಿದ ಕೋರಿಕೆಗೆ ಕ್ಯಾರೆ ಎನ್ನದ ರಾಜ, ಹಲವು ದಿನಗಳ ನಂತರ ಆಕೆ ಗರ್ಭವತಿಯಾದ ಬಳಿಕ ಊರಿಗೆ ತಂದು ಬಿಡುತ್ತಾನೆ. ಆ ಸಂದರ್ಭದಲ್ಲಿ ಆಕೆಯನ್ನು ಮತ್ತೆ ತಮ್ಮ ಊರಿಗೆ ಸೇರಿಸಿಕೊಳ್ಳಲೊಪ್ಪದ ಹಿರಿಯರು ಅಲ್ಲಿಂದ ಹೊರದಬ್ಬುತ್ತಾರೆ. ಬಂಚರಾ (ನೆಲೆಯಿಲ್ಲದವಳು) ಎಂಬ ಅಡ್ಡಹೆಸರನ್ನು ಪಡೆದು ಜರ್ಜರಿತಳಾಗಿ ಅಲ್ಲಿಂದ ನಿರ್ಗಮಿಸಿದ ಆಕೆ, ನಂತರ ಹುಟ್ಟುವ ತನ್ನ ಮಗಳನ್ನು ಬೆಳೆಸಿ ಆ ರಾಜವಂಶದ ಕುಡಿಯನ್ನು ವೇಶ್ಯಾವಾಟಿಕೆಗೆ ತಳ್ಳುವುದರ ಮೂಲಕ ಸೇಡು ತೀರಿಸಿಕೊಳ್ಳುತ್ತಾಳೆ. ಹೀಗೆ ಆರಂಭವಾದ ಪದ್ಧತಿ ಮುಂದಿನ ಪೀಳಿಗೆಗಳಿಗೂ ಹಬ್ಬಿ ಇಂದಿಗೂ ಮುಂದುವರಿದಿದೆಯೆಂದು ಹೇಳಲಾಗುತ್ತದೆ.

ಜೀವನಾಧಾರ ಹೆಣ್ಣು!

ಬಂಚರಾ ಸಮುದಾಯದಲ್ಲಿ ಕೇವಲ ಐದೇ ಸಾವಿರ ಜನರಿದ್ದರೂ ವೇಶ್ಯೆಯರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರತಿ ಐದು ಹೆಣ್ಣು ಮಕ್ಕಳಲ್ಲಿ ಒಬ್ಬಳು ವೇಶ್ಯೆಯಾಗಿದ್ದಾಳೆ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಜತೆಗೆ ಕಿತ್ತು ತಿನ್ನುವ ಬಡತನ. ಮನೆಯ ಹಿರಿಯಾಕೆ ದುಡಿದು ಹಾಕುವುದರಿಂದ ಕುಟುಂಬದ ಗಂಡುಮಕ್ಕಳು ಉಂಡಾಡಿಗಳಾಗಿ ಬೆಳೆಯುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಏನೆಂದರೆ ಏನೂ ಜವಾಬ್ದಾರಿ ವಹಿಸುವುದಿಲ್ಲ. ಪರಿಣಾಮವಾಗಿ ಈ ಪಂಗಡದ ಹುಡುಗರಿಂದು ಅನೇಕ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪೊಲೀಸರಿಗೆ ತಲೆನೋವಾಗಿದ್ದಾರೆ.

ಈ ಸಮುದಾಯದ ಹೆಣ್ಣುಮಕ್ಕಳು ಎಷ್ಟು ಮುಗ್ಧರೆಂದರೆ, ಅವರು ತಮ್ಮನ್ನು ತಾವು ವೇಶ್ಯೆಯರೆಂದು ಕರೆದುಕೊಳ್ಳಲು ಒಪು್ಪವುದಿಲ್ಲ. ಅವರ ಪ್ರಕಾರ, ‘ನಾವೇನೂ ಗ್ರಾಹಕರನ್ನು ಕರೆಯುವುದಿಲ್ಲ. ಅವರಾಗಿಯೇ ಬರುತ್ತಾರೆ. ನಾವು ಎಲ್ಲರೊಂದಿಗೆ ಮನೆಯಲ್ಲಿಯೇ ಇರುತ್ತೇವೆ, ನಾವು ವೇಶ್ಯೆಯರಲ್ಲ’ ಎನ್ನುತ್ತಾರೆ.

ವಿವಿಧ ಸಮುದಾಯಗಳಲ್ಲಿದೆ ಈ ಪದ್ಧತಿ!

ಮಧ್ಯಪ್ರದೇಶದ ಬೆಡಿಯಾ ಹಾಗೂ ಸಾನ್ಸಿ ಎನ್ನುವ ಸಮುದಾಯದಲ್ಲೂ ಇಂಥದ್ದೇ ವ್ಯವಸ್ಥೆ ಇದೆ. ಇಲ್ಲೂ ಹೆಣ್ಣುಮಕ್ಕಳನ್ನು ವೇಶ್ಯಾವೃತ್ತಿಗೆ ಬಿಟ್ಟು ಮನೆಯವರೆಲ್ಲ ಆಕೆಯ ಆದಾಯದಲ್ಲೇ ಬದುಕುತ್ತಾರೆ. ಇದಕ್ಕೆ ಅವರು ‘ಖಾಂದಾನಿ ದಂಧಾ’ ಎಂದು ಗೌರವ ನೀಡುತ್ತಾರೆ. ವಿಚಿತ್ರವೆಂದರೆ, ಬೆಡಿಯಾ ಸಮುದಾಯದ ಗಂಡಸರು ಬೇರೆ ಸಮುದಾಯದ ಹೆಣ್ಣುಮಕ್ಕಳನ್ನೇ ಮದುವೆಯಾಗುತ್ತಾರೆ. ತಮ್ಮದೇ ಸಮುದಾಯದ ಹುಡುಗಿಯಾದರೆ ಆಕೆಯ ಕನ್ಯತ್ವದ ಬಗ್ಗೆ ಅನುಮಾನ. ಮನೆಯ ಹೆಣ್ಣುಮಕ್ಕಳನ್ನು ವೇಶ್ಯಾವೃತ್ತಿಗೆ ತಳ್ಳುವ ಇವರು, ಸೊಸೆಯಂದಿರನ್ನು ಮನೆಯಿಂದ ಆಚೆ ಕಳುಹಿಸದೇ ಕಾಯುತ್ತಾರೆ! ಖಿಲವಾಡಿಯರಿಂದ ದುಡ್ಡು ಪಡೆದು ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ತಂದುಹಾಕುವುದೊಂದೇ ಇವರು ಮಾಡುವ ಕೆಲಸ.

ಮೇಲ್ನೋಟಕ್ಕೆ ಇದು ಸಾಂಪ್ರದಾಯಿಕ ವೃತ್ತಿಯಂತೆ ಕಂಡರೂ ಬಹುಮುಖ ಆಯಾಮದ ಸಾಮಾಜಿಕ ಸಮಸ್ಯೆಯಾಗಿದೆ. ಏಕೆಂದರೆ, ಈ ಸಂಪ್ರದಾಯದಿಂದಲೇ ಮಧ್ಯಪ್ರದೇಶದ ಶಾಜಾಪುರ, ಗುನಾ, ವಿದಿಷಾ, ಸಾಗರ್, ಶಿವಪುರಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳ ಕಳ್ಳಸಾಗಣೆ ಅತಿಯಾಗಿದೆ.

ಇದನ್ನು ತಡೆಗಟ್ಟಲೆಂದು ಬೆಡಿಯಾ ಸಮುದಾಯದ 65 ವರ್ಷದ ರಾಮ್ ಸಾನೆಹಿ ಎಂಬುವವರು ಹೋರಾಡಿದ್ದರು. ಈ ಅನಿಷ್ಟ ಪದ್ಧತಿಗೆ ಕೊನೆ ಹಾಡಬೇಕೆಂದು ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಬಂಧಿಯಾದವರು ಇಬ್ಬರು ಮಾತ್ರ. ಬಳಿಕ, ಮದುವೆಯೊಂದೇ ಇದಕ್ಕೆ ಪರಿಹಾರ ಎಂದು ಅನೇಕ ಹೆಣ್ಣುಮಕ್ಕಳನ್ನು ಬಲವಂತವಾಗಿ ಮದುವೆ ಮಾಡಲಾಗಿತ್ತು. ಆದರೆ, ಅದೂ ವಿಫಲವಾಯಿತು, ಏಕೆಂದರೆ, ಮದುವೆಯಾದವರಲ್ಲಿ ಬಹುತೇಕರು ಏಜೆಂಟ್​ಗಳಾಗಿದ್ದರು. ಅವರು ಈ ಹೆಂಗಸರನ್ನು ಮತ್ತೆ ಮಾರಾಟ ಮಾಡಿದ್ದರು! ಹೀಗಾಗಿ, ಸಮಸ್ಯೆ ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ಅಷ್ಟು ಸರಳವಾಗಿಲ್ಲ ಎನ್ನುವ ಸತ್ಯದ ಅರಿವಾಗುತ್ತದೆ. ಗುಜರಾತ್​ನ ವಾಡಿಯಾ ಎಂಬ ಊರೂ ಈ ಸಂಪ್ರದಾಯಕ್ಕೆ ಕುಖ್ಯಾತಿ ಹೊಂದಿದೆ. ಇಲ್ಲಿಯೂ ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಮತ್ತೊಂದು ‘ಬ್ರೆಡ್​ವಿನ್ನರ್’ ಬಂದಳು ಎಂದು ಸಂಭ್ರಮಿಸುತ್ತಾರಂತೆ! 12 ವರ್ಷಕ್ಕೇ ವೇಶ್ಯಾವೃತ್ತಿಗೆ ನೂಕುತ್ತಾರೆ. ಉತ್ತರ ಪ್ರದೇಶದ ನಟ್​ಪುರ್ವಾ ಎನ್ನುವ ಗ್ರಾಮದಲ್ಲಿಯೂ ಹೆಣ್ಣು ಮಕ್ಕಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಹೆಣ್ಣು ಹುಟ್ಟಿದರೆ ಸಂಭ್ರಮ!

ಹೆಣ್ಣು ಜೀವನಾಧಾರವೆಂಬ ಕಾರಣಕ್ಕೆ ಇಲ್ಲಿ ಹೆಣ್ಣು ಹುಟ್ಟಿದರೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಿರಿಯ ಹೆಣ್ಣನ್ನು ಮದುವೆಯಾಗಲು ಪಂಗಡದ ರಿವಾಜು ಅಡ್ಡಿಯಾಗುವುದರಿಂದ ಹುಡುಗರಿಗೆ ವಧು ತರಲು ವಧುದಕ್ಷಿಣೆ ಕೊಡುವುದು ಕಡ್ಡಾಯ. ಬೇರೆ ಪಂಗಡದಿಂದ ಹೆಣ್ಣುಮಕ್ಕಳನ್ನು ತಂದು ಇವರ ಗಂಡುಗಳಿಗೆ ಮದುವೆ ಮಾಡಿಸುವುದರ ಪರಿಣಾಮವಾಗಿ, ಇದೀಗ ಇವರಲ್ಲಿ ಗಂಡಿಗಿಂತ ಅನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಜಾಸ್ತಿ ಇದೆ. ಹಿರಿಮಗಳು ಋತುಮತಿಯಾದ ತಕ್ಷಣವೇ ಮನೆಯಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ವೇಶ್ಯಾವಾಟಿಕೆಗೆ ನೂಕಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತೀರಾ ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸಿ ಜೀವನಪೂರ್ತಿ ಕಷ್ಟ ಅನುಭವಿಸುವ ವ್ಯಥೆಯ ಕಥೆಗಳು ಸಾಕಷ್ಟಿವೆ. ಸಹಜವಾಗಿಯೇ ಎಳೆಯ ಪ್ರಾಯದಲ್ಲಿ ಕೆಟ್ಟ ಚಟಗಳಿಗೆ ದಾಸರಾಗುವ ಈ ಹೆಣ್ಣುಮಕ್ಕಳು, ನಂತರ ಹಲವು ಲೈಂಗಿಕ ರೋಗಗಳಿಗೆ ತುತ್ತಾಗಿರುವ ಉದಾಹರಣೆಗಳೂ ಬೇಕಾದಷ್ಟಿವೆ.

ಬೀಸುತ್ತಿದೆ ಬದಲಾವಣೆಯ ಗಾಳಿ

ಈ ಕೆಟ್ಟ ಸಂಪ್ರದಾಯಕ್ಕೆ ಅಂತ್ಯ ಹಾಡುವ ಪ್ರಯತ್ನ ಇದೀಗ ಆರಂಭವಾಗಿದೆ. ಹಲವು ಸಂಘಟನೆಗಳು ಮತ್ತು ಸರ್ಕಾರದ ಪ್ರಯತ್ನದ ಫಲವಾಗಿ ಬಂಚರಾಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಸಾಗಿದೆ. ನಿಧಾನವಾಗಿಯಾದರೂ ಈ ಪಂಗಡದ ಹುಡುಗಿಯರನ್ನು ಶಾಲೆಗಳಿಗೆ ಕಳಿಸಿ ಅಕ್ಷರ ಜ್ಞಾನ ನೀಡಲಾಗುತ್ತಿದೆ. ಇದೀಗ, ಈ ಸಮುದಾಯದ ಶೇ.9ರಷ್ಟು ಹೆಣ್ಣುಮಕ್ಕಳು ಅಕ್ಷರಸ್ಥರಾಗಿದ್ದಾರೆ. ಹೊಸ ತಲೆಮಾರಿನ ಹೆಣ್ಣುಮಕ್ಕಳಲ್ಲಿ ಅನೇಕರು ಈ ಗೊಡ್ಡು ಸಂಪ್ರದಾಯಕ್ಕೆ ನೇರವಾಗಿಯೇ ಸವಾಲು ಹಾಕತೊಡಗಿದ್ದಾರೆ. ಆದರೆ ಆರ್ಥಿಕ ಸ್ವಾವಲಂಬನೆಗೆ ಬೇರೆ ಮಾರ್ಗಗಳು ಇಲ್ಲದಿರುವುದು ಪ್ರಮುಖ ತೊಡಕಾಗಿದೆ. ಆ ಮಹಿಳೆಯರಿಗೆ ತುರ್ತಾಗಿ ಗೌರವಯುತ ಉದ್ಯೋಗದ ವ್ಯವಸ್ಥೆಯಾಗಬೇಕಾಗಿದೆ.

Comments are closed.