ರಾಷ್ಟ್ರೀಯ

ಕೇರಳ ಮೂಲದ ಸಿಆರ್‌ಫಿಎಫ್ ಯೋಧನ ಜಾನಪದ ಗೀತೆ ವೈರಲ್

Pinterest LinkedIn Tumblr


ಪಲಕ್ಕಾಡ್: ಕೇರಳ ಮೂಲದ ಸಿಆರ್‌ಪಿಎಫ್ ಯೋಧನೊಬ್ಬ ಹಾಡಿರುವ ಜಾನಪದ ಗೀತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೇರಳದ ಪಲಕ್ಕಾಡ್ ಜಿಲ್ಲೆಯ ವಿ ಸತೀಶ್ ಕುಮಾರ್ ಎಂಬ ಯೋಧ ಹಾಡಿರುವ ಜಾನಪದ ಹಾಡಿಗೆ ಫೇಸ್‌ಬುಕ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಈ ಯೋಧ ಕರ್ತವ್ಯ ನಿರ್ವಹಿಸುತಿದ್ದಾರೆ.

ಮಲಯಾಳಂನಲ್ಲಿ ಹಾಡಿರುವ ಭಾವಪೂರ್ಣ ಜಾನಪದ ಗೀತೆಗೆ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ. ಉಗ್ರರನ್ನು ಹತ್ತಿಕ್ಕಲು ಹೊರಡುವುದಕ್ಕೂ ಮುನ್ನ ಈ ಹಾಡನ್ನು ಹಾಡಿ ಸಹ ಯೋಧರಲ್ಲಿ ಸತೀಶ್ ಸ್ಫೂರ್ತಿ ತುಂಬಿದ್ದಾರೆ. ಸತೀಶ್ ಸಹೋದ್ಯೋಗಿಯೊಬ್ಬರು ಈ ಹಾಡನ್ನು ಚಿತ್ರೀಕರಿಸಿಕೊಂಡು ಪೊಸ್ಟ್ ಮಾಡಿದ್ದು ಇದೀಗ ಅದು ವೈರಲ್ ಆಗಿದೆ.

ಇದುವರೆಗೆ ಫೇಸ್‍ಬುಕ್‍ನಲ್ಲಿ ಈ ಹಾಡು 1 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 2900 ಶೇರ್ ಆಗಿದೆ. ದೇಶದ ನಾನಾ ಮೂಲೆಗಳಿಂದ ಸತೀಶ್ ಅವರ ಈ ಗೀತೆಯನ್ನು ಮೆಚ್ಚಿ ಪ್ರತಿಕ್ರಿಯೆ ಹರಿದುಬರುತ್ತಿದೆ. ಸಿಆರ್‌ಪಿಎಫ್‌ ಬ್ಯಾಟಾಲಿಯನ್ ಕಮಾಂಡರ್ ಸುರೇಂದ್ರ ಸಿಂಗ್ ಸಹ ಸತೀಶ್ ಅವರನ್ನು ಅಭಿನಂದಿಸಿದ್ದಾರೆ.

ಸತೀಶ್ ಅವರ ಹಾಡನ್ನು ಕೇಳಿ ಕೊಹಿಮಾದ ಹಲವಾರು ಸಂಸ್ಥೆಗಳು ಅವರನ್ನು ಆಹ್ವಾನಿಸುತ್ತಿವೆ. ಇತ್ತೀಚೆಗೆ ಕೊಹಿಮಾದ ಸರಕಾರಿ ಶಾಲೆಯಲ್ಲಿ ಇದೇ ಹಾಡನ್ನು ಹಾಡಿ ರಂಜಿಸಿದ್ದಾರೆ ಸತೀಶ್. ಇದರ ಜತೆಗೆ ನಾಗಾಲ್ಯಾಂಡ್ ಬುಡಕಟ್ಟಿನ ಅಂಗಾಮಿ ಭಾಷೆಯ ಹಾಡುಗಳನ್ನೂ ಸತೀಶ್ ಕಲಿಯುತ್ತಿದ್ದಾರಂತೆ.

ಸತೀಶ್‍ಗೆ ಮದುವೆಯಾಗಿದ್ದು ಇತ್ತೀಚೆಗಷ್ಟೇ ತಂದೆಯಾಗಿದ್ದರು. ತನ್ನ ಪತ್ನಿ ಮತ್ತು ಮಗುವಿಗಾಗಿ ಒಂದು ಹಾಡನ್ನು ಸ್ವತಃ ತಾವೇ ರಚಿಸಿ ಹಾಡಿ ಅದನ್ನೂ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೇಶಸೇವೆ ಜತೆಗೆ ಕಲಾಸೇವೆ ಸಲ್ಲಿಸುತ್ತಿರುವ ಈ ಯೋಧನಿಗಿರಲಿ ನಿಮ್ಮದೊಂದು ಸಲಾಂ.

Comments are closed.