ರಾಷ್ಟ್ರೀಯ

ಕೆಲ ಪ್ರಮುಖ ನಾಯಕರು ಜಾಮೀನು ಪಡೆದು ಹೊರಗಿರುವುದರಿಂದ ಕಾಂಗ್ರೆಸ್ ಈಗ ‘ಬೇಲ್ ಗಾಡಿ’: ಮೋದಿ ಲೇವಡಿ

Pinterest LinkedIn Tumblr

ಕಾಂಗ್ರೆಸ್ ನಾಯಕರು ಜಾಮೀನು ಪಡೆದಿದ್ದು, ಪಕ್ಷ ಇದೀಗ ‘ಬೇಲ್ ಗಾಡಿ’ ಆಗಿದೆ: ಪ್ರಧಾನಿ ಮೋದಿ
ಜೈಪುರ: ಕಾಂಗ್ರೆಸ್ ಪಕ್ಷದಲ್ಲಿ ಕೆಲ ಪ್ರಮುಖ ನಾಯಕರು ಜಾಮೀನು ಪಡೆದು ಹೊರಗಿದ್ದು, ಹೀಗಾಗಿ ಕಾಂಗ್ರೆಸ್’ ಪಕ್ಷವನ್ನು ಜನರು ‘ಬೇಲ್ ಗಾಡಿ’ ಎಂದು ಕರೆಯಲು ಆರಂಭಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರು ಹಾಗೂ ಮಾಜಿ ಸಚಿವರುಗಳಾಗಿದ್ದವರು ಇತ್ತೀಚಿನ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಕ್ಷದ ಉದ್ದೇಶಗಳನ್ನು ತಿಳಿದ ಜನರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ‘ಬೇಲ್ ಗಾಡಿ’ ಎಂದು ಕರೆಯಲು ಆರಂಭಿಸಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಬಳಿಕ 2016 ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ್ದ ಸರ್ಜಿಕಲ್ ದಾಳಿಯನ್ನು ಟೀಕೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಸೇನೆಯ ಸಾಮರ್ಥ್ಯದ ಕುರಿತಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಈ ಹಿಂದೆಂದೂ ಈ ರೀತಿ ನಡೆದಿರಲಿಲ್ಲ. ಇಂತಹ ರಾಜಕೀಯ ಮಾಡುತ್ತಿರುವವರನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ.

ವಿವಾದಿತ ಸಮಾನ ವೇತನ, ಸಮಾನ ಪಿಂಚಣಿ ವಿವಾದವನ್ನು ಸರ್ಕಾರ ಬಗೆಹರಿಸಿದೆ. ಕೆಲವರು ಸರ್ಕಾರ ಮಾಡುತ್ತಿರುವ ಉತ್ತಮ ಕೆಲಸಗಳಿಗೆ ಬೆಂಬಲ ನೀಡುವುದಿಲ್ಲ. ಕೇಂದ್ರದಲ್ಲಿಯೇ ಆಗಲೀ ರಾಜ್ಯ ರಾಜಸ್ಥಾನದಲ್ಲಿಯೇ ಆಗಲೀ, ಜನರಿಗೆ ತಲುಪುತ್ತಿರುವ ಲಾಭಗಳ ಕುರಿತು ಜನರು ಸಂತಸ ಪಡಬೇಕಿದೆ. ಕೆಲವರಿಗೆ ಪ್ರಧಾನಿ ಮೋದಿ ಹಾಗೂ ಅವರ ಕೆಲಸವನ್ನು ನೋಡಿದರೆ ಇರಿಸು ಮುರಿಸುಗೊಳ್ಳುತ್ತಾರೆ.

ನಮ್ಮ ಸರ್ಕಾರ ಕೇವಲ ವಿಕಾಸವೆಂಬ ಅಜೆಂಡಾವನ್ನು ಹೊಂದಿದೆ. ಜೈಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಕೊಂಡಾಡಲೇಬೇಕು. ಜನರಿಗೆ ತಲುಪುತ್ತಿರುವ ಲಾಭಗಳು ಅತ್ಯುತ್ತಮವಾಗಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರನ್ನು ಹೊಗಳಿರುವ ಅವರು, 2013ರಲ್ಲಿ ವಸುಂದರಾ ರಾಜೇ ಅವರು ಅಧಿಕಾರ ಸ್ವೀಕಾರ ಮಾಡಿದ್ದಾಗ ರಾಜ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಿತ್ತು. ವಸುಂದರಾ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಕಾರ್ಯಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಬಳಿಕ ರಾಜ್ಯ ಕಾರ್ಯವೈಖರಿ ಸಂಸ್ಕೃತಿಯನ್ನೇ ವಸುಂದರಾ ಅವರು ಬದಲಾಯಿಸಿದರು ಎಂದಿದ್ದಾರೆ.

ಬಳಿಕ ಕೇಂದ್ರ ಸರ್ಕಾರದ ಯಶಸ್ವಿ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, ರಾಜಸ್ಥಾನ ರಾಜ್ಯ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

Comments are closed.