ರಾಷ್ಟ್ರೀಯ

ಮಕ್ಕಳ ಕಳ್ಳರ ವದಂತಿ! ಸೈನಿಕರಿಂದ 3 ಸಾಧುಗಳ ರಕ್ಷಣೆ

Pinterest LinkedIn Tumblr


ಗುವಾಹಟಿ: ಮಕ್ಕಳ ಕಳ್ಳರ ವದಂತಿ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಸುದ್ದಿಯಿಂದ ಸಾಕಷ್ಟು ಸಾವು, ನೋವುಗಳು ಸಂಭವಿಸುತ್ತಿರುವ ಘಟನೆ ನಡೆಯುತ್ತಿರುವ ನಡುವೆಯೇ ಹತ್ತಾರು ಜನರ ಗುಂಪು ಒಟ್ಟಾಗಿ ಹೊಡೆಯುತ್ತಿದ್ದಾಗಲೇ ಮೂವರು ಸಾಧುಗಳನ್ನು ಸೈನಿಕರು ಹಾಗೂ ಪೊಲೀಸರು ಸಕಾಲಕ್ಕೆ ಮಧ್ಯೆಪ್ರವೇಶಿಸುವ ಮೂಲಕ ಜೀವ ರಕ್ಷಿಸಿರುವ ಪ್ರಸಂಗ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂನ ಡಿಮಾ ಹಸಾವೋ ಜಿಲ್ಲೆಯ ಮಾಥುರ್ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಮಕ್ಕಳ ಕಳ್ಳರೆಂಬ ಗುಮಾನಿ ಮೇಲೆ ಮೂವರು ಸಾಧುಗಳನ್ನು ನೂರಾರು ಮಂದಿ ಗುಂಪುಗೂಡಿ ದಾಳಿ ನಡೆಸಲು ಮುಂದಾಗಿದ್ದರು.

ಈ ಮೂವರು ಉತ್ತರಪ್ರದೇಶದಿಂದ ಮಾಥುರ್ ಗೆ ಆಗಮಿಸಿದ್ದರು. ಆದರೆ ಕಾರಿನಲ್ಲಿ ಆಗಮಿಸಿದ್ದ ಇವರನ್ನು ಗುಂಪು ಅಡ್ಡಗಟ್ಟಿ, ಕಾರಿನಿಂದ ಹೊರಗೆಳೆದು ಸಾರ್ವಜನಿಕರು ವಾಗ್ವಾದ ಶುರು ಮಾಡಿದ್ದರು.

ಅದಾಗಲೇ ಅಸ್ಸಾಂನ ಕರ್ಬಿಯಲ್ಲಿ ಮಕ್ಕಳ ಕಳ್ಳರ ವದಂತಿಗೆ ಇಬ್ಬರನ್ನು ಹೊಡೆದು ಕೊಂದು ಹಾಕಿದ್ದ ಘಟನೆ ಜನರ ಮನಸ್ಸಿನಿಂದ ಮಾಸಿಲ್ಲವಾಗಿತ್ತು. ಹೀಗೆ ಗುಂಪುಗೂಡಿದ್ದ ಜನರನ್ನು ಕಂಡು ಆತಂಕಕ್ಕೀಡಾಗಿದ್ದ ಕೆಲವು ಸ್ಥಳೀಯರು ಆರ್ಮಿ ಘಟಕಕ್ಕೆ ಮಾಹಿತಿ ನೀಡಿದ್ದರು.

ಮಾಹಿತಿ ಪಡೆದ ಕ್ಷಣದಲ್ಲಿ ಸೈನಿಕರು ಸ್ಥಳಕ್ಕೆ ಆಗಮಿಸಿದ್ದರು. ಬಂದಾಗ ಓರ್ವ ಸಾಧುವನ್ನು ರಕ್ಷಿಸಿದ್ದು, ಮತ್ತಿಬ್ಬರು ಗುಂಪಿನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಆದರೂ ಅರ್ಧ ಕಿಲೋ ಮೀಟರ್ ವರೆಗೆ ಅಟ್ಟಿಸಿಕೊಂಡು ಹೋಗಿದ್ದ ಸ್ಥಳೀಯರು ಹಿಡಿದು ತಂದು, ಸೈನಿಕರ ವಶಕ್ಕೆ ಒಪ್ಪಿಸಿದ್ದರು.

ತದನಂತರ ಮೂವರು ಸಾಧುಗಳನ್ನು ಆರ್ಮಿ ಕ್ಯಾಂಪ್ ಗೆ ಕರೆದೊಯ್ದು ವಿಚಾರಣೆ ನಡೆಸಿ, ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Comments are closed.