ರಾಷ್ಟ್ರೀಯ

ಮತ್ಸರದಿಂದ 8 ವರ್ಷದ ಮೈದುನನ ಕೊಲೆ

Pinterest LinkedIn Tumblr


ಕೋಲ್ಕತಾ: ಕಳೆದ ಶನಿವಾರ ನಗರದ ಗಾರ್ಡನ್ ರೀಚ್‌ನಲ್ಲಿ ನಡೆದ 8 ವರ್ಷದ ಬಾಲಕನ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು, ಆತನ ಅತ್ತಿಗೆಯೇ ಕೊಲೆಗೈದಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.

ಮೃತ ರಾಜು ದಾಸ್ 3 ನೇ ತರಗತಿಯಲ್ಲಿ ಓದುತ್ತಿದ್ದು, ಅತ್ತಿಗೆ ಪ್ರಿಯಾಂಕಾ(19)ಳಿಂದ ಹತ್ಯೆಯಾಗಿದ್ದಾನೆ, ಎಂದು ಪೊಲೀಸರು ತಿಳಿಸಿದ್ದಾರೆ.

ರಾಜು ದಾಸ್ ನೀರಿನ ಡ್ರಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ. ಆತ ಆಕಸ್ಮಿಕವಾಗಿ ನೀರಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು. ಆದರೆ ಮೃತನ ಅಣ್ಣ ಸುಬ್ರತಾ ಮತ್ತು ಆರೋಪಿ ಯುವತಿಯ ಪತಿ ಮಾತ್ರ ತಮ್ಮನ ಸಾವು ಆಕಸ್ಮಿಕ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಕೇವಲ 4 ಅಡಿಯಷ್ಟಿರುವ ನೀರಲ್ಲಿ ಮುಳುಗಿ ಆತ ಹೇಗೆ ಸಾವನ್ನಪ್ಪಬಹುದೆಂಬುದು ಆತನ ಪ್ರಶ್ನೆಯಾಗಿತ್ತು. ತಮ್ಮ ಸಾವನ್ನಪ್ಪಿದ ಸನ್ನಿವೇಶವನ್ನು ವಿಶ್ಲೇಷಿಸಲು ಆತ ತನ್ನ ಕುಟುಂಬದ ಸದಸ್ಯರನ್ನು ಪದೇ ಪದೇ ಪ್ರಶ್ನಿಸುತ್ತಲೇ ಇದ್ದ. ಮೊದಲಿನಿಂದಲೂ ಪತ್ನಿ ಮೇಲೆ ಆತನಿಗಿದ್ದ ಅನುಮಾನ ಸೋಮವಾರ ಸಂಜೆ ಮತ್ತಷ್ಟು ಬಲವಾಯಿತು. ಪ್ರಶ್ನೆಗೆ ಆಕೆ ನೀಡುತ್ತಿದ್ದ ಉತ್ತರಗಳು ಅಸಮಂಜಸವಾಗಿದ್ದವು. ಸತ್ಯ ಹೇಳು ಎಂದು ಬೈದು ಹೇಳಿದಾಗ ಆಕೆ ಪತಿಯ ಮುಂದೆ ಕಣ್ಣೀರಿಡುತ್ತಾ ತಾನೇ ಕೊಲೆಗೈದಿರುವುದಾಗಿ ಬಾಯ್ಬಿಟ್ಟಿದ್ದಾಳೆ.

ತಕ್ಷಣ ಪೊಲೀಸರಿಗೆ ಫೋನ್ ಕರೆ ಮಾಡಿದ ಸುಬ್ರತಾ ವಿಷಯವನ್ನೆಲ್ಲ ಹೇಳಿದ್ದಾನೆ. ಅಷ್ಟೇ ಅಲ್ಲ ಆತನೇ ಎಫ್ಐಆರ್ ದಾಖಲಿಸಿದ್ದಾನೆ.

ಪತಿ ಸೇರಿದಂತೆ ಕುಟುಂಬದ ಇತರ ಸದಸ್ಯರು ತನಗಿಂತ ಹೆಚ್ಚಾಗಿ ಬಾಲಕನನ್ನೇ ಪ್ರೀತಿಸುತ್ತಾರೆ, ಎಂದು ಅಸೂಯೆ ಬೆಳೆಸಿಕೊಂಡಿದ್ದ ಯುವತಿ ಅದೇ ಕಾರಣಕ್ಕೆ ತಾನೇ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಪತಿ ಸೇರಿದಂತೆ ಮನೆಯವರೆಲ್ಲರೂ ರಾಜುವನ್ನೇ ಹೆಚ್ಚು ಪ್ರೀತಿಸುವುದರಿಂದ ಅಸೂಯೆಗೊಳಗಾಗಿ ಕೊಲೆಗೈದೆ. ಆಟವಾಡುತ್ತ ಆತ ಟ್ರಮ್‌ನಲ್ಲಿಳಿದಾಗ ಮುಚ್ಚಳ ಮುಚ್ಚಿದೆ. ಆತ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿಕೊಂಡು ಡ್ರಮ್ ಮುಚ್ಚಳ ತೆಗೆದೆ ಎಂದು ಪ್ರಿಯಾಂಕಾ ಬಾಯ್ಬಿಟ್ಟಿದ್ದಾಳೆ.

ಸುಬ್ರತಾ ಮತ್ತು ಪ್ರಿಯಾಂಕಾಗೆ 6 ತಿಂಗಳ ಹಿಂದೆ ಅಷ್ಟೇ ಮದುವೆಯಾಗಿತ್ತು. ಪ್ರಿಯಾಂಕಾಗಿದು ಎರಡನೇ ಮದುವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.