ರಾಷ್ಟ್ರೀಯ

ಗೋ ರಕ್ಷಣೆ ಹಿಂಸೆ ಅಪರಾಧ, ರಾಜ್ಯ ಸರಕಾರಗಳು ಬಾಧ್ಯ: ಸುಪ್ರೀಂ

Pinterest LinkedIn Tumblr


ಹೊಸದಿಲ್ಲಿ : ಗೋ ರಕ್ಷಣೆ ಹೆಸರಿನಲ್ಲಿ, ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಯಾರನ್ನೇ ಅಗಲೀ ಹೊಡೆದು ಚಚ್ಚಿ ಸಾಯಿಸುವುದು ಅಪರಾಧ. ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯಾಗಿರುವುದರಿಂದ, ಈ ರೀತಿಯ ಹಿಂಸೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಸರಕಾರಗಳ ಮೇಲಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಹೇಳಿದೆ.

ಗುಂಪು ಹಿಂಸೆಗಳನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದಕ್ಕಾಗಿ ಸೂಕ್ತ ನಿರ್ದೇಶ ನೀಡಬೇಕೆಂದು ಕೋರುವ ಅರ್ಜಿಯ ಮೇಲಿನ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಈ ರೀತಿಯಾಗಿ ಹೇಳಿತು.

ಜನರ ಗುಂಪು ಶಂಕಿತರನ್ನು ಹೊಡೆದು ಚಚ್ಚಿ ಸಾಯಿಸುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆ; ಇದನ್ನು ತಡೆಯುವಲ್ಲಿನ ಆದೇಶವನ್ನು ಪಾಲಿಸದ ರಾಜ್ಯ ಸರಕಾರಗಳನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಬೇಕು ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿತು.

ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್‌ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್‌ವಿಲ್ಕರ್‌ ಮತ್ತು ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು “ಗುಂಪು ಹಿಂಸೆಯಂತಹ ಗಂಭೀರ ಅಪರಾಧಗಳನ್ನು ತಡೆಯುವಲ್ಲಿ ರಾಜ್ಯ ಸರಕಾರಗಳು ಜವಾಬ್ದಾರಿಯುತವಾಗಿರಬೇಕು; ಯಾರೊಬ್ಬರೂ ಕೂಡ ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವಂತಿಲ್ಲ’ ಎಂದು ಹೇಳಿತು. ಅರ್ಜಿಯಲ್ಲಿ ಮಾಡಿಕೊಂಡಿರುವ ನಿವೇದನೆಯ ಪ್ರಕಾರ ತಾನು ಆದೇಶವನ್ನು ಹೊರಡಿಸುವುದಾಗಿ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿತು.

ಗುಂಪು ಹಿಂಸೆಯ ಬಗ್ಗೆ ಕೇಂದ್ರ ಸರಕಾರ ಸಂಪೂರ್ಣ ಅರಿವನ್ನು ಹೊಂದಿದೆ; ಆದರೆ ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯಾಗಿರುವುದರಿಂದ ಆಯಾ ರಾಜ್ಯ ಸರಕಾರಗಳೇ ಅವುಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ ಎಸ್‌ ನರಸಿಂಹ ಹೇಳಿದರು.

Comments are closed.