ರಾಷ್ಟ್ರೀಯ

ಹೆಣ್ಣು ಮಗು ಹೆರುವುದೇ ಬೇಡವೆಂದು ನಿರ್ಧರಿಸಿದ ದಂಪತಿ

Pinterest LinkedIn Tumblr


ಭಾಗ್ಪತ್: ಮಧ್ಯಪ್ರದೇಶದಲ್ಲಿ 7 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರದ ಬಳಿಕ ಭಯಭೀತಗೊಂಡಿರುವ ದಂಪತಿಯೊಂದು ಹೆಣ್ಣು ಮಕ್ಕಳು ಬದುಕಲು ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಭಾವಿಸಿ ಮಕ್ಕಳನ್ನು ಹೆರದಿರುವುದೇ ವಾಸಿ ಎಂಬ ನಿರ್ಧಾರಕ್ಕೆ ಬಂದಿದೆ.

ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿರುವ ಸುಭಾಷ್ ಚಂದ್ ಕಶ್ಯಪ್ ಹಾಗೂ ಅವರ ಪತ್ನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಒಂದು ವೇಳೆ ತಮಗೆ ಹೆಣ್ಣುಮಗುವಾದರೆ, ಆ ಮಗುವಿನ ಸುರಕ್ಷತೆಯ ಚಿಂತೆ ಕಾಡುತ್ತದೆ. ಲೈಂಗಿಕ ದೌರ್ಜನ್ಯ ಕೃತ್ಯಕ್ಕೆ ಬ್ರೇಕ್ ಬೀಳುವವರೆಗೂ ಹಾಗೂ ಹೆಣ್ಣುಮಕ್ಕಳ ಜೀವ, ಜೀವನಕ್ಕೆ ಸರಕಾರ ಖಾತರಿ ನೀಡುವವರೆಗೂ ನಮಗೆ ಮಕ್ಕಳೇ ಬೇಡ ಎಂದಿದೆ ದಂಪತಿ.

ರಾಷ್ಟ್ರಮಟ್ಟದ ಶೂಟರ್ ಆಗಿರುವ ಸುಭಾಷ್ ಚಂದ್ ಕಶ್ಯಪ್ , ರಾಜವರ್ಧನ್ ಸಿಂಗ್ ರಾಥೋರ್ ಅವರ ಶಿಷ್ಯರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿರುವ ಅವರು, ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪತ್ನಿ ಜತೆ ಪ್ರತಿಭಟನೆ ಕೈಗೊಂಡಿದ್ದರು. ಬಳಿಕ ದಂಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೆಸರಿನಲ್ಲಿ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದ್ದಾರೆ.

ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಯಾರೊಬ್ಬರ ಜೀವಕ್ಕೂ ರಕ್ಷಣೆ, ಭದ್ರತೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಕಶ್ಯಪ್, ಮಂದಸೌರ್, ಲಖನೌ, ಕಥುವಾ, ಭಾಗ್ಪತ್ ಹಾಗೂ ಕಂದ್ಲಾ ಘಟನೆಗಳ ಬಳಿಕ ಆತಂಕಗೊಂಡಿರುವುದಾಗಿ ಹೇಳಿದ್ದಾರೆ.

2012 ರಲ್ಲಿ ಸುಭಾಷ್ ವಿಆರ್‌ಎಸ್ ತೆಗೆದುಕೊಂಡಿದ್ದರು.

Comments are closed.