ರಾಷ್ಟ್ರೀಯ

ಶಾಲಾ ಮಕ್ಕಳ ಜೀವ ಉಳಿಸಲು ಬಸ್ ಚಾಲಕನಿಂದ ಪ್ರಾಣ ಬಲಿ!

Pinterest LinkedIn Tumblr


ವಿರಾರ್: ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿ ಹೋಗಲಿದ್ದ ನಾಲ್ಕು ಮಕ್ಕಳ ಪ್ರಾಣ ರಕ್ಷಿಸಲು ಹೋದ ಖಾಸಗಿ ವ್ಯಾನ್ ಚಾಲಕ ತಾನೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ವಸೈ ಗ್ರಾಮದಲ್ಲಿ ನಡೆದಿದೆ.

ಪ್ರಕಾಶ್ ಪಾಟೀಲ್ (44) ಮೃತ ವ್ಯಾನ್ ಚಾಲಕನಾಗಿದ್ದಾನೆ.

ಪಾಟೀಲ್, ನಾಲ್ಕು ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದಾಗ ಭಾರಿ ಮಳೆ ಬೀಳುತ್ತಿದ್ದರಿಂದ ರಸ್ತೆ ಸರಿಯಾಗಿ ಗೋಚರಿಸುತ್ತಿರಲಿಲ್ಲ. ವ್ಯಾನ್ ನರಿಂಗಿ ಗ್ರಾಮದ ಬಳಿ ಸಾಗುತ್ತಿದ್ದಾಗ ಪಕ್ಕದಲ್ಲಿದ್ದ ಕಾಲುವೆಯೊಂದು ತುಂಬಿ ನೀರು ರಸ್ತೆ ಮೇಲೆ ಹರಿಯಹತ್ತಿತು. ಸುತ್ತಮುತ್ತಲಿನ ಪ್ರದೇಶದಲ್ಲಿ ಮೂರು ಅಡಿಯಷ್ಟು ನೀರು ತುಂಬಿಕೊಂಡು ರಸ್ತೆ ಯಾವುದು, ಕಾಲುವೆ ಯಾವುದು ಎಂಬುದು ಅಂದಾಜು ಮಾಡಲಾಗದಾಯಿತು. ದುರದೃಷ್ಟವಶಾತ್ ಪಾಟೀಲ್ ತನ್ನ ವ್ಯಾನ್‌ನ್ನು ರಸ್ತೆ ಬದಲು ಕಾಲುವೆ ಕಡೆಗೆ ಡ್ರೈವ್ ಮಾಡಿಬಿಟ್ಟ. ಆದರೆ ಅಷ್ಟರಲ್ಲಿ ಅಪಾಯವನ್ನು ಊಹಿಸಿದ ಪಾಟೀಲ್ ಮಕ್ಕಳಿಗೆ ಬಸ್‌ನಿಂದ ಕೆಳಗಿಳಿಯುವಂತೆ ಹೇಳಿದ್ದಾನೆ.

ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಇಬ್ಬರು ಮಕ್ಕಳು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನೆತ್ತಿ ಪಾಟೀಲ್ ರಸ್ತೆಗೆ ಬಿಟ್ಟಿದ್ದಾನೆ. ಇನ್ನೇನು ತಾನು ಕೂಡ ಮಕ್ಕಳಿದ್ದೆಡೆಗೆ ಹೋಗಬೇಕೆನ್ನುವಷ್ಟರಲ್ಲಾತ ಕಾಲು ಜಾರಿದ್ದರಿಂದ ಪಾಟೀಲ್ ಕಾಲುವೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾನೆ.

ತಮ್ಮ ಡ್ರೈವರ್ ಅಂಕಲ್ ಮುಳುಗಿ ಹೋಗುತ್ತಿದ್ದಾನೆ ಎಂದು ಮಕ್ಕಳು ಕಿರುಚಾಡುತ್ತ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆದರೆ ನೀರಿನ ರಭಸಕ್ಕೆ ಪಾಟೀಲ್ ಕೊಚ್ಚಿ ಹೋಗಿದ್ದ. ಘಟನೆ ನಡೆದ 20 ನಿಮಿಷಗಳ ಬಳಿಕ ಆತನ ದೇಹ 1.5 ಕಿಮೀ ದೂರದಲ್ಲಿ ಪತ್ತೆಯಾಗಿದೆ.

ಪರೋಪಕಾರಿಯಾಗಿದ್ದ ಸಹೋದರ ಈ ದೊಡ್ಡ ಗುಣದಿಂದಾಗಿಯೇ ತನ್ನ ಕೊನೆಯಾಗುತ್ತದೆ ಎಂದು ಯೋಚಿಸಿರಲಾರ ಎಂದು ಕಣ್ಣೀರಾಗುತ್ತಾನೆ, ಪಾಟೀಲ್ ಸಹೋದರ.

Comments are closed.