ರಾಷ್ಟ್ರೀಯ

34 ಇಂಚಿನ ವರ ಮತ್ತು 33 ಇಂಚಿನ ವಧು!

Pinterest LinkedIn Tumblr


ಗೋರಕ್ಪುರ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ, ಪ್ರತಿಯೊಬ್ಬರಿಗೂ ದೇವರು ಬಾಳಸಂಗಾತಿಯನ್ನು ನಿಗದಿ ಮಾಡಿರುತ್ತಾನೆ ಎಂದು ಹೇಳುತ್ತಾರೆ. ಉತ್ತರ ಪ್ರದೇಶದ ಗೋರಕ್ಪುರದಲ್ಲಿ ನಡೆದ ಈ ವಿಶಿಷ್ಟ ಮದುವೆಯನ್ನು ನೋಡಿದರೆ ಈ ಮಾತು ನಿಜಕ್ಕೂ ತೂಕದ್ದು ಎನ್ನಿಸದೇ ಇರದು.

ಕುಬ್ಜಳಾಗಿದ್ದ ಸಾರಿಕಾ ಮಿಶ್ರಾಳಿಗಾಗಲಿ, ಅವಳಿಗಿಂತ ಒಂದಿಂಚು ಎತ್ತರವಿದ್ದ ಸುನೀಲ್ ಪಾಠಕ್‌ಗಾಗಲಿ ತಮಗೆ ಜೀವನ ಸಂಗಾತಿ ಸಿಗುತ್ತಾರೆಂಬ ಕಲ್ಪನೆಯೇ ಇರಲಿಲ್ಲ. 42 ವರ್ಷದ ಸುನೀಲ್ ಪಾಠಕ್ ಖಜ್ನಿ ನಿವಾಸಿಯಾಗಿದ್ದು, ಕಡಿಮೆ ಎತ್ತರದಿಂದಾಗಿ ಜೀವನದಲ್ಲಿ ಸಾಕಷ್ಟು, ನೋವು, ಸಮಸ್ಯೆಗಳನ್ನೆದುರಿಸಿದ್ದರು.ಆದರೆ ಬದುಕನ್ನು ಸವಾಲಾಗಿ ಸ್ವೀಕರಿಸಿದ್ದ ಅವರು ಸಂಸ್ಕೃತದಲ್ಲಿ ಪಿಎಚ್‌ಡಿ ಮಾಡಿದ್ದರು. ಕಡಿಮೆ ಎತ್ತರದ ಹಿನ್ನೆಲೆಯಲ್ಲಿ ಮದುವೆಯಾಗಲು ಹೆಣ್ಣು ಸಿಗುವುದು ಸಾಧ್ಯವೇ ಇಲ್ಲ ಎಂದವರು ಭಾವಿಸಿದ್ದರು. ಆದರೆ ಅವರ ಹಣೆಬರಹವೇ ಬೇರೆ ಇತ್ತು.

ಅದೇ ನಗರದಲ್ಲಿ ವಾಸಿಸುತ್ತಿದ್ದ 36 ವರ್ಷದ ಸಾರಿಕಾ ಕೂಡ ತಾವು ಕುಳ್ಳಗಿದ್ದ ಕಾರಣಕ್ಕೆ ಮದುವೆಯ ಕನಸನ್ನು ಕೈ ಚೆಲ್ಲಿದ್ದರು. ಆದರೆ ದೇವರು ಬಯಸಿದರೆ ಎಲ್ಲವೂ ಸಾಧ್ಯ ಎಂಬಂತೆ ಎರಡು ಕುಟುಂಬ ಆಕಸ್ಮಿಕವಾಗಿ ಭೇಟಿಯಾದವು ಮತ್ತು ಸುನೀಲ್ – ಸಾರಿಕಾ ಮದುವೆಯನ್ನು ನಿಗದಿ ಮಾಡಿಯೇ ಬಿಟ್ಟವು.

ಕೊನೆಗೂ ಸುನೀಲ್- ಸಾರಿಕಾ ವಿವಾಹ ಬಂಧನದಲ್ಲಿ ಒಂದಾದರು. ಈ ವಿಶಿಷ್ಟ ಮದುವೆ ಜಿಲ್ಲೆಯಾದ್ಯಂತ ಸುದ್ದಿಯಾಗಿ ಜನರು ತಂಡೋಪತಂಡವಾಗಿ ಬಂದು ವಧುವರರನ್ನು ಆಶೀರ್ವದಿಸಿ ಮರಳಿದ್ದು ಕಂಡು ಬಂತು.

Comments are closed.