ರಾಷ್ಟ್ರೀಯ

2019ರ ಲೋಕಸಭಾ ಚುನಾವಣೆಗೆ ಮುನ್ನ ರಾಮ ಮಂದಿರ ನಿರ್ಮಾಣ: ಸಂತರಿಗೆ ಯೋಗಿ

Pinterest LinkedIn Tumblr


ಅಯೋಧ್ಯೆ: “2019ರ ಲೋಕಸಭಾ ಚುನಾವಣೆಗೆ ಮುನ್ನ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು; ಅಲ್ಲಿಯ ವರೆಗೆ ಸಹನೆಯಿಂದಿರಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದು ಇಲ್ಲಿ ಸಂತ ಸಮ್ಮೇಳನದಲ್ಲಿ ಭರವಸೆ ನೀಡಿದರು.

‘ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಸಹನೆ ತೋರಿ’ ಎಂದು ಯೋಗಿ ಅದಿತ್ಯನಾಥ್‌ ಅವರು ಸಂತರಲ್ಲಿ ವಿನಂತಿಸಿಕೊಂಡರು.

‘ಮೊಘಲ್‌ ದೊರೆ ಬಾಬರನು ರಾಮ ಮಂದಿರವನ್ನು ಧ್ವಂಸ ಮಾಡಲು ಯಾವುದೇ ಕೋರ್ಟ್‌ ಆದೇಶ ಹಿಡಿದುಕೊಂಡು ಬಂದಿರಲಿಲ್ಲ; 1992ರಲ್ಲಿ ಬಾಬರಿ ಮಸೀದಿಯನ್ನು ಯಾವುದೇ ಕೋರ್ಟ್‌ ನಿರ್ದೇಶನದ ಪ್ರಕಾರ ಧ್ವಂಸ ಮಾಡಿಲ್ಲ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ರಾಮ್‌ ವಿಲಾಸ್‌ ವೇದಾಂತಿ ಅವರು ಹೇಳಿಕೆ ನೀಡಿದ ಬೆನ್ನಿಗೇ ಆದಿತ್ಯನಾಥ್‌ ಅವರಿಂದ ಈ ಹೇಳಿಕೆ ಬಂದಿದೆ.

“ರಾಮ ಲಲ್ಲಾನ ಮೂರ್ತಿ ಹೇಗೆ ಒಂದು ದಿನ ಅಯೋಧ್ಯೆಯಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತೋ ಹಾಗೆಯೇ ಒಂದು ದಿನ ದಿಢೀರನೆ ಇಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದು ವೇದಾಂತಿ ಹೇಳಿದ್ದರು.

ಇದಕ್ಕೆ ಉತ್ತರವೆಂಬಂತೆ ಯೋಗಿ ಆದಿತ್ಯನಾಥ್‌ ಅವರು, “ನಾವು ಜಗತ್ತಿನ ಅತೀ ದೊಡ್ಡ ಪ್ರಜಾಸತ್ತೆಯಲ್ಲಿ ಬದಕುತ್ತಿದ್ದೇವೆ; ಇಲ್ಲಿ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ತಮ್ಮ ಪಾತ್ರವನ್ನು ಸಂತುಲನೆಯಲ್ಲಿ ನಿರ್ವಹಿಸುತ್ತವೆ. ನಾವು ಈ ವ್ಯವಸ್ಥೆಯ ನೀತಿ ನಿಯಮಗಳನ್ನು ಮರೆಯುವಂತಿಲ್ಲ…”

”…ಮರ್ಯಾದಾ ಪುರುಷೋತ್ತಮ ರಾಮನು ಈ ಭೂಮಂಡಲದ ಒಡೆಯನಾಗಿದ್ದಾನೆ; ಆತನ ಅನುಗ್ರಹದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ; ಆದರೆ ಅದಕ್ಕಾಗಿ ನಾವು ಸ್ವಲ್ಪ ಕಾಲ ಕಾಯಬೇಕಾಗುತ್ತದೆ; ಹಾಗಿರುವಾಗ ಸಂತ ಸಮುದಾಯದಲ್ಲಿ ಆ ಬಗ್ಗೆ ಸಂಶಯವೇಕೆ ? ಇಲ್ಲಿಯ ವರೆಗೂ ನೀವು ಸಹನೆ, ತಾಳ್ಮೆಯಿಂದ ಇದ್ದಿರಿ. ನಾವು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುವುದು. ಈ ಇಡಿಯ ಜಗತ್ತೇ ನಿಂತಿರುವುದು ಆಶಾವಾದದ ಮೇಲೆ” ಎಂದು ಹೇಳಿದರು.

Comments are closed.