ರಾಷ್ಟ್ರೀಯ

ಬ್ಯಾಟರಿ ನುಂಗಿದ್ದ 11 ತಿಂಗಳ ಹಸುಳೆ ಜೀವ ಉಳಿಸಿದ ವೈದ್ಯರು

Pinterest LinkedIn Tumblr


ಪುಣೆ: ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬ್ಯಾಟರಿ ನುಂಗಿದ್ದ ಹಸುಳೆಯನ್ನು ಬಚಾವ್ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಆಟವಾಡುತ್ತಿದ್ದ ಹುಸೇನ್ ಹಫೀಸ್ ತಾಂಬೋಲಿ ಎಂಬ 11 ತಿಂಗಳ ಮಗು ಇದ್ದಕ್ಕಿದಂತೆ ನರಳಾಡತೊಡಗಿದ್ದು, ಗಾಬರಿಗೊಂಡ ಪೋಷಕರು ಕೂಡಲೇ ಭೋಸಾರಿಯ ಮಂಕಿಕರ್ ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಲ್ಲಿ ಎಂಡೋಸ್ಕೋಪಿ ಸೌಲಭ್ಯ ಇಲ್ಲದ ಕಾರಣ, ಮಗುವನ್ನು ಸೌದಾಗರ್‌ನ ಓಸ್ಟರ್ ಆ್ಯಂಡ್ ಪರ್ಲ್ ಆಸ್ಪತ್ರೆಗೆ ರವಾನಿಸಲಾಯಿತು.

ಪರ್ಲ್ ಆಸ್ಪತ್ರೆಯಲ್ಲಿ ಮಗುವಿಗೆ ಎಕ್ಸ್‌ ರೇ ಮಾಡಿಸಲಾಗಿದ್ದು, ಅನ್ನನಾಳದಲ್ಲಿ ಬ್ಯಾಟರಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತರಾದ ವೈದ್ಯರು, ಎಂಡೋಸ್ಕೋಪಿ ಮೂಲಕ ಬ್ಯಾಟರಿ ಹೊರ ತೆಗೆದಿದ್ದಾರೆ. ಇದು ಶಸ್ತ್ರಚಿಕಿತ್ಸೆ ರಹಿತ ವಿಧಾನವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಾ ಮಂದಾರ್ ದೀಫೋಡೆ ( ಓಸ್ಟರ್ ಆ್ಯಂಡ್ ಪರ್ಲ್ ಆಸ್ಪತ್ರೆಯ ಗ್ಯಾಸ್ಟ್ರೊಎನ್ಟೆರೊಲೊಜಿಸ್ಟ್ ಮತ್ತು ಗ್ಯಾಸ್ಟ್ರೋಇಂಟೆಸ್ಟಿನಲ್ ಎಂಡೋಸ್ಕೋಪಿಸ್ಟ್), ‘ಶನಿವಾರ ಮುಂಜಾನೆ 8 ಗಂಟೆ ಸುಮಾರಿಗೆ ನರಳಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಎಕ್ಸ್‌ ರೇ ತೆಗೆದು ನೋಡದಾಗ ಮಗುವಿನ ಅನ್ನನಾಳದಲ್ಲಿ ಬ್ಯಾಟರಿ ಸಿಕ್ಕಿಕೊಂಡಿರುವುದು ಪತ್ತೆಯಾಗಿದೆ. ಬ್ಯಾಟರಿಯ ಹೊರಹೊದಿಕೆ ತೆರೆದುಕೊಂಡರೆ, ಒಳಗಿರುವ ಆ್ಯಸಿಡ್ ಹೊರಬಂದು ಮಗುವಿನ ಪ್ರಾಣಕ್ಕೆ ಅಪಾಯವಾಗುವ ಸಂಭವವಿದ್ದುದರಿಂದ, ತ್ವರಿತವಾಗಿ ಎಂಡೋಸ್ಕೋಪಿ ನಡೆಸಲಾಯಿತು. ಮಗು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ’ ಎಂದಿದ್ದಾರೆ.

Comments are closed.