ರಾಷ್ಟ್ರೀಯ

ಉತ್ತರ ಪ್ರದೇಶ ಪೊಲೀಸರಿಂದ ಶಾಲಾ ಮಕ್ಕಳಿಗೆ ಪಾಠ!

Pinterest LinkedIn Tumblr


ಲಖನೌ: ಉತ್ತರ ಪ್ರದೇಶ ಪೊಲೀಸರು ರಾಜ್ಯದ ಶಾಲಾ ಮಕ್ಕಳಿಗಾಗಿ ವಿಶೇಷ ಬೇಸಿಗೆ ಶಿಬಿರ ಏರ್ಪಡಿಸುತ್ತಿದ್ದಾರೆ. ಜೂನ್ 24ರಿಂದ ಜೂನ್ 26ರವರೆಗೆ ಯುನಿಸೆಫ್‌ ನೆರವಿನೊಂದಿಗೆ ರಾಜ್ಯದ 12 ಜಿಲ್ಲೆಗಳ ರಿಸರ್ವ್ ಪೊಲೀಸ್ ಲೈನ್ಸ್‌ನಲ್ಲಿ ಶಿಬಿರವನ್ನು ಆಯೋಜನೆ ಮಾಡಲಿದ್ದಾರೆ.

ಈ ಬೇಸಿಗೆ ಶಿಬಿರದಲ್ಲಿ 8 – 14 ವರ್ಷದ ಮಕ್ಕಳು ಭಾಗಿಯಾಗಲಿದ್ದು, ಪೊಲೀಸ್ ಕುದುರೆ ಹಾಗೂ ಪೊಲೀಸ್ ವಾಹನಗಳನ್ನು ಸವಾರಿ ಮಾಡುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಜತೆಗೆ, ಪೊಲೀಸ್ ಠಾಣೆಗಳಲ್ಲಿ ಕೆಲಸ ಕಾರ್ಯಗಳು ಹೇಗೆ ನಡೆಯಲಿದೆ ಎಂಬ ಪ್ರಾಥಮಿಕ ಮಾಹಿತಿಯನ್ನು ಮಕ್ಕಳು ಪಡೆದುಕೊಳ್ಳಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಸುರಕ್ಷಿತವಾಗಿರಬೇಕು ಎಂಬುದರ ಬಗ್ಗೆಯೂ ಮಕ್ಕಳು ಸಲಹೆ ಪಡೆಯಲಿದ್ದಾರೆ. ಅಲ್ಲದೆ, ವಿಪತ್ತುಗಳು ಸಂಭವಿಸಿದಾಗ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಪೊಲೀಸರ ದೈಹಿಕ ಅಭ್ಯಾಸಗಳನ್ನು ನಿರ್ವಹಿಸುವುದರ ಜತೆಗೆ ಅನೇಕ ಮನರಂಜನಾ ಚಟುವಟಿಕೆಗಳನ್ನು ಪೊಲೀಸರು ನಡೆಸಲಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಕ್ಯಾಂಪ್ ನಡೆಯಲಿದ್ದು, ಮಕ್ಕಳಿಗೆ ತಿಂಡಿ ಹಾಗೂ ಊಟವನ್ನು ಸಹ ನೀಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಶಿಬಿರದಲ್ಲಿ ಮಕ್ಕಳ ಜತೆಗೆ ಅವರ ಪೋಷಕರು ಸಹ ಪಾಲ್ಗೊಳ್ಳಬೇಕಿದೆ. ಉತ್ತರ ಪ್ರದೇಶ ರಾಜಧಾನಿ ಲಖನೌ, ಅಲಹಾಬಾದ್, ಗೋರಖ್‌ಪುರ, ಕಾನ್ಪುರ್ ನಗರ್, ಝಾನ್ಸಿ, ಮೀರತ್, ಗಾಜಿಯಾಬಾದ್, ನೋಯ್ಡಾ, ಆಗ್ರಾ, ಆಲಿಗಢ, ಮೊರಾದಾಬಾದ್ ಹಾಗೂ ಬರೇಲಿಯಲ್ಲಿ ಸಹ ಈ ಬೇಸಿಗೆ ಶಿಬಿರವನ್ನು ಪೊಲೀಸರು ಆಯೋಜಿಸಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಈ ರೀತಿಯ ಬೇಸಿಗೆ ಶಿಬಿರವನ್ನು ಮೊದಲ ಬಾರಿಗೆ ಆಯೋಜನೆ ಮಾಡಿದ್ದು, ಇದರ ಯಶಸ್ಸಿನ ಬಳಿಕ ರಾಜ್ಯದ ಹಲವೆಡೆ ಆಯೋಜನೆ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಲೈಂಗಿಕ ಕಿರುಕುಳ, ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಗೂ ಮಾದಕ ವ್ಯಸನಿಗಳಾಗುವುದು ಹೆಚ್ಚಾಗುತ್ತಿದೆ. ಹೀಗಾಗಿ, ಮಕ್ಕಳನ್ನು ಸರಿದಾರಿಗೆ ಕೊಂಡೊಯ್ಯುವುದು ಈ ಶಿಬಿರದ ಉದ್ದೇಶ ಎಂದು ಈ ಶಿಬಿರವನ್ನು ಮೊದಲ ಬಾರಿಗೆ ಆಯೋಜಿಸಿದ್ದ ವಾರಾಣಸಿ ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ.

ಇನ್ನು, ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಖನೌನಿಂದಲೇ ಸುಮಾರು ಐದು ಸಾವಿರ ಅರ್ಜಿಗಳು ಬಂದಿವೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಶಿಬಿರದಲ್ಲಿ ಭಾಗವಹಿಸುವವರಿಗೆ ಲೈಂಗಿಕ ಕಿರುಕುಳ, ತಮ್ಮ ಸುರಕ್ಷತೆ ಹಾಗೂ ಸೈಬರ್‌ ಅಪರಾಧಗಳಿಗೆ ಸಂಬಂಧಪಟ್ಟಂತೆ ಅಧ್ಯಯನದ ವಸ್ತುಗಳನ್ನು ನೀಡಲಾಗುವುದು.ಇದರೊಂದಿಗೆ ವರ್ಣಚಿತ್ರಗಳ ಸ್ಪರ್ಧೆ, ಕವನ ವಾಚನ ಹಾಗೂ ಇತರ ಸ್ಪರ್ಧೆಗಳನ್ನು ಆಯೋಜಿಸಲಿದ್ದು, ಮಕ್ಕಳಿಗೆ ಟಿ – ಶರ್ಟ್‌ಗಳನ್ನು ಉಚಿತವಾಗಿ ವಿತರಿಸಲಿದ್ದೇವೆ ಎಂದು ಸಹ ಅವರು ಹೇಳಿದ್ದಾರೆ.

Comments are closed.