ರಾಷ್ಟ್ರೀಯ

ಯುಎಇ: ಮರಣದಂಡನೆಯಿಂದ ಪಾರಾದವರಲ್ಲಿ 14 ಜನ ಪಂಜಾಬಿಗಳು

Pinterest LinkedIn Tumblr


ಜಲಂಧರ್: ಕೊಲೆ ಮತ್ತು ಸುಲಿಗೆ ಆರೋಪದಲ್ಲಿ ಯುಎಇಯಲ್ಲಿ ಮರಣದಂಡನೆ ಮತ್ತು ಕಠಿಣ ಶಿಕ್ಷೆಗೆ ಗುರಿಯಾಗಿದ್ದ 15 ಮಂದಿಯನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆತರಲಾಗಿದ್ದು, ಅವರ ಪೈಕಿ 14 ಮಂದಿ ಪಂಜಾಬಿಗಳು ಎನ್ನುವುದು ಬಹಿರಂಗವಾಗಿದೆ.

ದುಬೈನಲ್ಲಿ ನೆಲೆಸಿರುವ ಹೋಟೆಲ್ ಉದ್ಯಮಿ ಮತ್ತು ದಾನಿ ಎಸ್‌ ಪಿ ಸಿಂಗ್ ಒಬೆರಾಯ್ ಇವರನ್ನು ರಕ್ಷಿಸಿದ್ದಾರೆ. ಒಬೆರಾಯ್ ಒಡೆತನದ ಟ್ರಸ್ಟ್‌, ದುಬೈ ಮತ್ತು ಅರಬ್ ಸಂಯುಕ್ತ ಒಕ್ಕೂಟದಲ್ಲಿ ನೆಲೆಸಿರುವ ಭಾರತೀಯರು ತೊಂದರೆಗೊಳಗಾದರೆ ಅವರಿಗೆ ನೆರವು ನೀಡುತ್ತದೆ. ಜತೆಗೆ ಅವರು ಈವರೆಗೆ 93 ಮಂದಿ ಭಾರತೀಯರು ಮರಣದಂಡನೆ ಮತ್ತು ಇತರ ಶಿಕ್ಷೆಗಳಿಗೆ ಗುರಿಯಾಗುವುದನ್ನು ತಪ್ಪಿಸಿ ರಕ್ಷಿಸಿದ್ದಾರೆ. ಅದಕ್ಕಾಗಿ ಅಲ್ಲಿನ ನ್ಯಾಯಾಲಯಕ್ಕೆ ದಂಡದ ರೂಪದಲ್ಲಿ 20 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಿದ್ದಾರೆ.

ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ 15 ಮಂದಿಯ ಪೈಕಿ 14 ಮಂದಿ ಪಂಜಾಬಿಗಳಾಗಿದ್ದರೆ, ಒಬ್ಬ ವ್ಯಕ್ತಿ ಬಿಹಾರದವನು. ಅವರನ್ನು ದೇಶಕ್ಕೆ ಕರೆತಂದು ಅವರ ಕುಟುಂಬದ ಜತೆಗೆ ಸೇರಿಸಲಾಗಿದೆ.

ಸರಿಯಾದ ವೀಸಾ, ಸೂಕ್ತ ವೇತನ ಮತ್ತು ಉದ್ಯೋಗದ ಮಾಹಿತಿಯಿಲ್ಲದೆ ಯುಎಇಗೆ ತೆರಳಿದ್ದ ಅವರು ವೇತನ ಸಾಲದಾದಾಗ ದುಷ್ಕೃತ್ಯಕ್ಕೆ ಇಳಿದು, ಹೆಚ್ಚಿನ ಹಣ ಗಳಿಕೆಯ ಉದ್ದೇಶ ಹೊಂದಿದ್ದರು. ಆದರೆ ಅಲ್ಲಿನ ಕಠಿಣ ಕಾನೂನಿನಿಂದಾಗಿ ಶಿಕ್ಷೆಗೆ ಗುರಿಯಾಗಿದ್ದರು.

Comments are closed.