ರಾಷ್ಟ್ರೀಯ

ಕಾಶ್ಮೀರಿಗಳು ಪಾಕ್ ಜತೆ ವಿಲೀನದ ಬದಲು ಸ್ವಾತಂತ್ರ್ಯ ಬಯಸುತ್ತಾರೆ: ಕಾಂಗ್ರೆಸ್ ಮುಖಂಡ

Pinterest LinkedIn Tumblr


ಹೊಸದಿಲ್ಲಿ: ಕಾಶ್ಮೀರಿಗಳು ಪಾಕಿಸ್ತಾನಕ್ಕೆ ಸೇರುವ ಬದಲು ಸ್ವಾತಂತ್ರ್ಯವನ್ನೇ ಬಯಸುತ್ತಾರೆ ಎಂಬ ಮಾಜಿ ಸರ್ವಾಧಿಕಾರಿ ಪರ್ವೇಜ್‌ ಮುಷರಫ್ ಹೇಳಿಕೆ ಸರಿಯಾಗಿದೆ ಎಂದು ಕಾಂಗ್ರೆಸ್‌ ನಾಯಕ ಸೈಫುದ್ದೀನ್ ಸೋಜ್‌ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಬಿಜೆಪಿ, ‘ಒಂದು ಪಾಕಿಸ್ತಾನ ಭಾರತದ ಹೊರಗಿದೆ; ಮತ್ತು ಕಾಂಗ್ರೆಸ್‌ನ ಒಳಗೇ ಒಂದು ಪಾಕಿಸ್ತಾನವಿದೆ’ ಎಂದು ಟೀಕಿಸಿದೆ.

ಕಾಶ್ಮೀರದ ಪರಿಸ್ಥಿತಿ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಗೆ ಸೋಜ್‌ ನೀಡಿದ ಹೇಳಿಕೆಗೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.

‘ಕಾಶ್ಮೀರಿಗಳು ಪಾಕ್ ಜತೆ ವಿಲೀನಗೊಳ್ಳಲು ಬಯಸುವುದಿಲ್ಲ; ಅವರ ಮೊದಲ ಆದ್ಯತೆ ಸ್ವಾತಂತ್ರ್ಯವೇ ಆಗಿದೆ ಎಂದು ಮುಷರಫ್‌ ಹೇಳಿದ್ದರು. ಅವರ ಆ ಹೇಳಿಕೆ ಅಂದು-ಇಂದು- ಮುಂದೆಯೂ ನಿಜವೇ ಆಗಿರುತ್ತದೆ. ನಾನೂ ಅದನ್ನೇ ಹೇಳುತ್ತೇನೆ. ಆದರೆ ಅದು ಅಸಾಧ್ಯದ ಮಾತು’ ಎಂದು ಎಎನ್‌ಐ ಜತೆ ಮಾತನಾಡುತ್ತ ಸೋಜ್‌ ಹೇಳಿಕೆ ನೀಡಿದ್ದರು.

ಬಿಜೆಪಿ ವಕ್ತಾರರಾದ ಸಂಬಿತ್ ಪಾತ್ರ, ಅಮಿತ್ ಮಾಳವೀಯ ಮತ್ತು ರವಿಶಂಕರ್ ಪ್ರಸಾದ್‌ ಅವರು ತಕ್ಷಣವೇ ಇದಕ್ಕೆ ತಿರುಗೇಟು ನೀಡಿದ್ದಾರೆ.

ಸೋಜ್ ಹೇಳಿಕೆ ಮುಷರಫ್‌ಗೆ ನೀಡಿದ ಸಮರ್ಥನೆ ಎಂದು ಮಾಳವೀಯ ಬಣ್ಣಿಸಿದ್ದಾರೆ.

‘ಕಾಂಗ್ರೆಸ್ ಯಾವತ್ತೂ ದೇಶವನ್ನು ಒಡೆಯಲು ಬಯಸುವವರ ಪರವಾಗಿಯೇ ಇರುತ್ತದೆ’ ಎಂದು ಪ್ರಸಾದ್‌ ಟೀಕಿಸಿದ್ದಾರೆ.

ಸೋಜ್ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ತಮ್ಮ ಈ ಹೇಳಿಕೆಯನ್ನೇ ವಿಸ್ತಾರವಾಗಿ ಉಲ್ಲೇಖಿಸಿರುವ ‘ಕಾಶ್ಮೀರ್‌: ಗ್ಲಿಂಪ್ಸಸ್‌ ಆಫ್ ಹಿಸ್ಟರಿ ಅಂಡ್‌ ಸ್ಟೋರಿ ಆಫ್‌ ಸ್ಟ್ರಗಲ್’ ಎಂಬ ಕೃತಿಯನ್ನು ಅವರು ಪ್ರಕಟಿಸಿದ್ದು, ಮುಂದಿನ ವಾರ ಬಿಡುಗಡೆಯಾಗಲಿದೆ.

2008ರಲ್ಲಿ ಸೋಜ್‌ ಅವರನ್ನು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನ್ಯಾಷನಲ್ ಕಾನ್ಫರೆನ್ಸ್‌ನ ಮಾಜಿ ನಾಯಕರಾಗಿರುವ ಅವರು 1999ರಲ್ಲಿ ಕಾಂಗ್ರೆಸ್ ಸೇರಿದ್ದರು. 1997ರ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಂಡಿಸಿದ ವಿಶ್ವಾಸ ಗೊತ್ತುವಳಿ ವಿರುದ್ಧ ಸೋಜ್‌ ಮತ ಹಾಕಿದ್ದರು.

ಎರಡು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್‌ ಮತ್ತೊಂದು ವಿವಾದ ಸೃಷ್ಟಿಸಿತ್ತು. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಪ್ರತ್ಯೇಕತಾವಾದಿಗಳ ಬೇಡಿಕೆಯನ್ನು ಅರ್ಥೈಸಿಕೊಂಡು ಮಾತುಕತೆಗೆ ಮುಂದಾಗಬೇಕು ಎಂದು ಕಾಂಗ್ರೆಸ್‌ ಹೇಳಿರುವುದಾಗಿ ಪಿಟಿಐ ವರದಿ ಮಾಡಿತ್ತು.

ಭಯೋತ್ಪಾದಕ ಬುರ್ಹಾನಿ ವಾನಿ ಹತ್ಯೆಯ ಸಂದರ್ಭದಲ್ಲೂ ಸೈಫುದ್ದೀನ್ ಸೋಜ್ ಉಗ್ರರ ಪರ ಹೇಳಿಕೆ ನೀಡಿದ್ದರು. ‘ಪರಿಸ್ಥಿತಿ ನನ್ನ ನಿಯಂತ್ರಣದಲ್ಲಿದ್ದರೆ ನಾನು ಬುರ್ಹಾನ್ ವಾನಿಯನ್ನು ಜೀವಂತ ಉಳಿಸಿ ಮಾತುಕತೆ ನಡೆಸುತ್ತಿದ್ದೆ’ ಎಂದು ಸೋಜ್ ಹೇಳಿದ್ದರು.

Comments are closed.