ರಾಷ್ಟ್ರೀಯ

ತನ್ನ ಹೆಂಡತಿಗೆ ಗಡ್ಡ ಬೆಳೆಯುತ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ ಗಂಡ: ಕೋರ್ಟ್ ಹೇಳಿದ್ದೇನು?

Pinterest LinkedIn Tumblr


ಅಹಮದಾಬಾದ್: ಪತ್ನಿಗೆ ಗಡ್ಡ ಬೆಳೆಯುತ್ತಿದೆ ಎಂದು ಆರೋಪಿಸಿದ ಪತಿಯೊಬ್ಬ ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ.

ಅರ್ಜಿದಾರ ರೂಪೇಶ್ ( ಹೆಸರು ಬದಲಿಸಲಾಗಿದೆ) ತನ್ನ ಪತ್ನಿ ರೂಪಾ(ಹೆಸರು ಬದಲಿಸಲಾಗಿದೆ) ಗೆ ಗಡ್ಡ ಬೆಳೆಯುತ್ತಿದ್ದು, ಆಕೆ ನೋಡಲು ಸಹ ಪುರುಷನಂತಿದ್ದಾಳೆ. ನನಗಾಕೆಯಿಂದ ವಿಚ್ಛೇದನ ಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ.

ಮದುವೆಗೆ ಮೊದಲು ನಾನು ಆಕೆಯನ್ನು ನೋಡಿರಲಿಲ್ಲ. ಮೊದಲ ಬಾರಿ ಆಕೆಯನ್ನು ನೋಡಲು ಹೋದಾಗ ದುಪಟ್ಟಾದಿಂದ ಮುಖವನ್ನು ಮುಚ್ಚಿಕೊಂಡಿದ್ದಳು. ಸಂಪ್ರದಾಯದ ನೆಪದಲ್ಲಿ ಮಗಳ ಮುಖ ತೋರಿಸಲು ಆಕೆಯ ತಂದೆ- ತಾಯಿ ಒಪ್ಪಲಿಲ್ಲ. ಸ್ವಲ್ಪ ದಿನದಲ್ಲೇ ನಡೆದು ಹೋದ ನಿಶ್ಚಿತಾರ್ಥ ಮತ್ತು ಮದುವೆಯಲ್ಲೂ ಸಹ ಆಕೆಯ ಮುಖವನ್ನು ನೋಡುವ ಅವಕಾಶ ನೀಡಲಿಲ್ಲ. ನಾನು ಮೊದಲ ಬಾರಿಗೆ ಆಕೆಯ ಮುಖ ನೋಡಿದಾಗ ಕ್ಲೀನ್ ಶೇವ್ ಮತ್ತು ಮೇಕ್- ಅಪ್ ಮಾಡಿಕೊಂಡಿದ್ದಳು. ಮದುವೆಯ ಬಳಿಕ 7 ದಿನ ಆಕೆಯ ಜತೆ ಕಳೆದ ನಾನು ಬಳಿಕ ಕೆಲಸದ ನಿಮಿತ್ತ ನಾನು ಬೇರೆ ಊರಿಗೆ ಹೋದೆ. ಹೀಗಾಗಿ ಪತ್ನಿಗೆ ಗಡ್ಡ ಬೆಳೆಯುವುದು ನನ್ನ ಗಮನಕ್ಕೆ ಬರಲಿಲ್ಲ ಎಂದು, ಪತಿರಾಯ ವಿಚ್ಛೇದನದ ದೂರಿನಲ್ಲಿ ತಿಳಿಸಿದ್ದ.

ಹಿಂತಿರುಗಿದ ನಾನು 15 ದಿನ ಅವಳ ಜತೆ ಕಳೆದಾಗ ಆಕೆಯ ಮುಖದಲ್ಲಿ ಗಡ್ಡ ಬೆಳೆಯುತ್ತಿರುವುದು ಬೆಳಕಿಗೆ ಬಂದಿದ್ದು, ಆಕೆ ಪುರುಷನಂತೆ ಕಾಣುತ್ತಿದ್ದಳು, ಎಂದಾತ ಹೇಳಿದ್ದಾನೆ.

ಈ ಕುರಿತು ಪತ್ನಿಯ ಪೋಷಕರಿಗೆ ತಿಳಿಸಿದಾಗ, ಆಕೆಯ ಜತೆ ನಿನ್ನ ಮದುವೆಯಾಗಿದೆ. ಹೊಂದಿಕೊಂಡು ಹೋಗು ಎಂದು ಹೇಳಿದ್ದಾರೆ. ಪ್ರತಿದಿನ ಪತಿ ಪತ್ನಿ ನಡುವೆ ಜಗಳ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಳಿಕ ಪತಿ ರೂಪೇಶ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ.

ರೂಪೇಶ್ ಆರೋಪಗಳನ್ನು ತಳ್ಳಿ ಹಾಕಿರುವ ರೂಪಾ ಪರ ವಕೀಲರು, ಆತ ಹೇಳುತ್ತಿರುವುದೆಲ್ಲ ಸುಳ್ಳು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆತ ವಿಚಾರಣೆಗೂ ಸರಿಯಾಗಿ ಹಾಜರಾಗಿಲ್ಲ. ಅಷ್ಟೇ ಅಲ್ಲ, ರೂಪೇಶ್ ಕುಟುಂಬ ವರದಕ್ಷಿಣೆಗಾಗಿ ರೂಪಾಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿತ್ತು, ಎಂದು ವಾದಿಸಿದರು.

ಪತಿ ವಿಚ್ಛೇದನ ಅರ್ಜಿಗ ಪ್ರತಿಕ್ರಿಯಿಸಿರುವ ರೂಪಾ ಈಗಲೂ ನಾನು ಅವನ ಜತೆ ಬದುಕಲು ಸಿದ್ಧ. ವಿಚ್ಛೇದನ ನೀಡಲೇಬೇಕೆಂದಾದರೆ 50 ಸಾವಿರ ಸಂಬಳ ಪಡೆಯುವ ಆತ ಜೀವನಾಂಶವಾಗಿ ನನಗೆ 20ಸಾವಿರ ನೀಡಬೇಕೆಂದು ಆಕೆ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಬೇಡಿಕೆ ಇಟ್ಟಿದ್ದಾಳೆ.

ವಾದ- ಪ್ರತಿವಾದವನ್ನು ಆಲಿಸಿದ ಕೋರ್ಟ್ ರೂಪೇಶ್ ವಿಚ್ಛೇದನದ ಅರ್ಜಿಯನ್ನು ತಿರಸ್ಕರಿಸಿದೆ. ಇಂತಹ ಕಾರಣಗಳಿಗೆಲ್ಲ ವಿಚ್ಛೇದನ ನೀಡಲಾಗದು. ಅಷ್ಟೇ ಅಲ್ಲ ರೂಪೇಶ್ ಮತ್ತು ಅವರ ಪರ ವಕೀಲರು ಕೋರ್ಟ್ ವಿಚಾರಣೆಗೆ ಸರಿಯಾಗಿ ಹಾಜರಾಗಿಲ್ಲ ಎಂದು ಕೋರ್ಟ್ ಹೇಳಿದೆ.

Comments are closed.