ರಾಷ್ಟ್ರೀಯ

ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ; ಭೂಕುಸಿತಕ್ಕೆ ನಾಲ್ವರು ಸಾವು-10 ಮಂದಿ ಕಣ್ಮರೆ: ಕೊಚ್ಚಿಹೋದ ರಸ್ತೆಗಳು

Pinterest LinkedIn Tumblr

ತಿರುವನಂತಪುರ: ಕೇರಳದ ಉತ್ತರ ಭಾಗದಲ್ಲಿ ಭಾರಿ ಮಳೆ ಬೀಳುತ್ತಿದ್ದು, ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಗುರುವಾರ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟು, 10 ಮಂದಿ ಕಣ್ಮರೆಯಾಗಿದ್ದಾರೆ.

ಬುಧವಾರ ಇಡೀ ರಾತ್ರಿ ಬಿದ್ದ ಭಾರಿ ಮಳೆಗೆ ಕೊಯಿಕ್ಕೋಡ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳಿಗ್ಗೆ ಭೂಕುಸಿತ ಉಂಟಾದ ಘಟನೆ ನಡೆದಿದ್ದು, ನಾಲ್ವರು ಸಾವಿಗೀಡಾಗಿ, 10 ಜನ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.

ಮೇ ಕೊನೆಯ ವಾರ ನೈಋತ್ಯ ಮುಂಗಾರು ಆರಂಭವಾದ ಬಳಿಕ, ಇಲ್ಲಿಯವರೆಗೆ ರಾಜ್ಯದಲ್ಲಿ ಮೃತರ ಸಂಖ್ಯೆ 27ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ಕುಸಿತವಾದ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಣ್ಮರೆಯಾದವರಿಗಾಗಿ ಶೋಧ ನಡೆದಿದೆ.

ಭೂಕುಸಿತ ಉಂಟಾಗಿ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಇದೊಂದು ದುರಂತ, ಹೃದಯ ಕಲಕುವಂತಹದ್ದು ಎಂದು ಹೇಳಿದ್ದಾರೆ. ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ಕೊಯಿಕ್ಕೋಡ್‌, ಮಲಪ್ಪುರಂ, ಕಣ್ಣೂರು, ವಯನಾಡು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.

ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳಲ್ಲಿ ನೀರಿನಮಟ್ಟ ಬಹುತೇಕ ಗರಿಷ್ಠ ಮಿತಿ ತಲುಪಿವೆ. ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಪ್ರವಾಹಕ್ಕೆ ರಸ್ತೆಗಳು ಕೊಚ್ಚಿಹೋಗಿದ್ದು, ಹಲವೆಡೆ ಹಾನಿಗೊಳಗಾಗಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಎಂಟು ಮನೆಗಳು ಪೂರ್ಣ ಹಾನಿಗೊಳಗಾಗಿರುವುದು ಸೇರಿದಂತೆ ರಾಜ್ಯದಲ್ಲಿ 270 ಮನೆಗಳಿಗೆ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.