ರಾಷ್ಟ್ರೀಯ

ನಿಫಾ ವೈರಸ್ ಗೆ ಬಲಿಯಾದವರಿಗೆ ಈ ವೈದ್ಯನಿಂದ ಗೌರವಯುತ ಅಂತ್ಯಕ್ರಿಯೆ

Pinterest LinkedIn Tumblr


ಕೋಯಿಕ್ಕೋಡ್‌: ಇದೊಂದು ರೀತಿ ಮನುಷ್ಯ ಸಂಬಂಧಗಳ ಅಸ್ತಿತ್ವವನ್ನೇ ನಿರಾಕರಿಸಬಲ್ಲ ಹೃದಯ ವಿದ್ರಾವಕ ಸನ್ನಿವೇಶವಾಗಿರುವಂತೆಯೇ, ಮನುಷ್ಯ ಸಂಬಂಧಗಳ ಬೆಸುಗೆಯನ್ನು ಗಟ್ಟಿಗೊಳಿಸುವ ಕಥಾನಕವೂ ಹೌದು.

ಇತ್ತೀಚೆಗೆ ಕೇರಳದಲ್ಲಿ ನಿಫಾಗೆ ಬಲಿಯಾದ ಕೆಲವರ ಅಂತ್ಯ ಸಂಸ್ಕಾರಕ್ಕೆ ತಂದೆ, ತಾಯಿ, ಗಂಡ, ಹೆಂಡತಿ, ಬಂಧು ಬಳಗ ಯಾರೂ ಮುಂದೆ ಬರಲಿಲ್ಲ. ಏಕೆಂದರೆ ತಮಗೂ ಆ ಸೋಂಕು ತಗುಲಿ ಸಾಯಬಹುದೆಂಬ ಭಯ ಅವರದು. ಆದರೆ ಕೋಯಿಕ್ಕೋಡ್‌ ಕಾರ್ಪೋರೇಷನ್‌ನ ಆರೋಗ್ಯಾಧಿಕಾರಿ ಡಾ. ಆರ್‌.ಎಸ್‌. ಗೋಪಕುಮಾರ್‌ ಆ ಎಲ್ಲ ಮೃತದೇಹಗಳಿಗೆ ಗೌರವಯುತ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮನುಷ್ಯತ್ವಕ್ಕೆ ಮತ್ತೊಂದು ಭಾಷ್ಯ ಬರೆದಿದ್ದಾರೆ. ಒಟ್ಟು ಹನ್ನೆರಡು ಮೃತದೇಹಗಳ ಅಂತ್ಯ ಸಂಸ್ಕಾರ ಅವರ ನೇತೃತ್ವದಲ್ಲೇ ನಡೆಯಿತು.

ಆದರೆ ಈ ಸಂದರ್ಭದಲ್ಲಿ ನನ್ನ ಹೃದಯವನ್ನು ಘಾಸಿಗೊಳಿಸಿದ ಕೆಲವು ವಿಚಾರಗಳಿವೆ ಎನ್ನುತ್ತಾರೆ ಅವರು. ನಿಫಾದಿಂದ ಮೃತಪಟ್ಟ ಹದಿನೇಳರ ಬಾಲಕನ ತಾಯಿ ಸೋಂಕಿನ ಶಂಕೆಯಿಂದ ಪ್ರತ್ಯೇಕ ವಾರ್ಡ್‌ನಲ್ಲಿದ್ದರು. ಆದರೆ ಒಮ್ಮೆಯಾದರೂ ಕೊನೆಯ ಬಾರಿಗೆ ಮಗುವಿನ ಮುಖ ನೋಡುವ ಮನಸ್ಸು ಮಾಡಲಿಲ್ಲ. ಉಳಿದಂತೆ ಬಾಲಕನ ಹತ್ತಿರದ ಯಾವುದೇ ಸಂಬಂಧಿಗಳೂ ಬರಲಿಲ್ಲ. ಅಂತ್ಯಕ್ರಿಯೆ ನೆರವೇರಿಸಲು ನನಗೆ ಅನುಮತಿ ನೀಡಿದ್ದರು. ಹೀಗಾಗಿ ಆ ಮಗುವಿನ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನರವೇರಿಸಿದೆ. ಅದು ನನ್ನ ಕರ್ತವ್ಯವೂ ಹೌದು ಎಂದು ಗೋಪಕುಮಾರ್‌ ಹೇಳುತ್ತಾರೆ.

53 ವರ್ಷದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಯಾರೂ ಇರಲಿಲ್ಲ. ಹತ್ತೊಂಬತ್ತು ವರ್ಷದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಆಕೆಯ ಗಂಡನಿಗೆ ನೆರವು ನೀಡುವಾಗ ಬಹಳ ನೋವಾಯಿತು. ಕರ್ನಾಟಕದ ಆ ಮಹಿಳೆ ವಿಷ ಸೇವಿಸಿದ್ದರು. ಆಕೆ ಬಂದ ಬಳಿಕ ಕೆಲವು ನಿಫಾ ಸೋಂಕಿತರು ಆಸ್ಪತ್ರೆಗೆ ಬಂದಿದ್ದರು. ಆದರೆ ಕೊನೆಗೆ ಆಕೆಗೆ ನಿಫಾ ಸೋಂಕು ತಗುಲಿರಲಿಲ್ಲ ಎಂಬುದು ದೃಢಪಟ್ಟಿತ್ತು ಎಂದು ಅವರು ಮೆಲುಕು ಹಾಕಿದರು.

ನಿಫಾ ಸೋಂಕಿಗೆ ಕೇರಳದಲ್ಲಿ ಕಳೆದ ತಿಂಗಳು ಒಟ್ಟು 17 ಮಂದಿ ಬಲಿಯಾಗಿದ್ದರು.

Comments are closed.