ಮುಂಬೈ: ಎನ್ ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿದ್ದರೂ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಮೂಲಗಳು ತಿಳಿಸಿರುವಂತೆ ನಾಳೆ ಅಂದರೆ ಬುಧವಾರ ಸಂಜೆ ಮುಂಬೈಗೆ ಆಗಮಿಸಲಿರುವ ಅಮಿತ್ ಶಾ ಅವರು, ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ. ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ಅವರ ನಿವಾಲ ಮಾತೋಶ್ರೀಗೆ ನಾಳೆ ಸಂಜೆ 6ಗಂಟೆಗೆ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಅಮಿತ್ ಶಾ ಓಲೈಸುವ ಪ್ರಯತ್ನ ಮಾಡಲಿದ್ದಾರೆ. ಅಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲೂ ಎನ್ ಡಿಎ ಮೈತ್ರಿಕೂಟದಲ್ಲೇ ಇರುವಂತೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿದ್ದ ಶಿವಸೇನೆ ಆ ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಗಳಿಂದಾಗಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದೆ. ಅಷ್ಟು ಮಾತ್ರವಲ್ಲದೇ ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿದೆ. ನಿನ್ನೆಯಷ್ಟೇ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ ದೇಶದ ಜನತೆ ಕಾಂಗ್ರೆಸ್ ಅಥವಾ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ನಾಯಕತ್ವವನ್ನು ಸಹಿಸುತ್ತಾರೆಯಾದರೂ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜುಗಲ್ ಬಂದಿಯನ್ನಲ್ಲ ಎಂದು ಟೀಕಿಸಿದ್ದರು.
ತನ್ನ ಮಿತ್ರಪಕ್ಷವೇ ತನ್ನನ್ನು ಟೀಕಿಸುತ್ತಿರುವ ಹಿನ್ನಲೆಯಲ್ಲಿ ಮತದಾರರಲ್ಲಿ ಬಿಜೆಪಿ ಕುರಿತು ತಪ್ಪು ಸಂದೇಶವಾಗುತ್ತಿದ್ದು. ಇದೇ ಕಾರಣಕ್ಕೆ ಅಮಿತ್ ಶಾ ಉದ್ಧವ್ ಠಾಕ್ರೆ ಅವರನ್ನು ಮನವೊಲಿಸುವ ಸಾಧ್ಯತೆ ಇದೆ. ಇದಲ್ಲದೆ ಇತ್ತೀಚಿನ ಚುನಾವಣಾ ಸಮೀಕ್ಷೆಗಳಲ್ಲಿ 2014ರಲ್ಲಿ ಬಿಜೆಪಿ ಗಳಿಸಿದಷ್ಟು ಸ್ಥಾನಗಳು 2019ರಲ್ಲಿ ಸಿಗುವುದಿಲ್ಲ ಎಂಬ ವರದಿ ಮೇರೆಗೆ ಶತಾಯಗತಾಯ ಲೋಕಸಭಾ ಚುನಾವಣೆ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಅಮಿತ್ ಶಾ ಈಗಿನಿಂದಲೇ ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಇದಕ್ಕೆ ಇಂಬು ನೀಡುವಂತೆ ನಿನ್ನೆಯಷ್ಟೇ ಬಿಜೆಪಿ ಹಿರಿಯ ನಾಯಕರಿಗೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಮಿತ್ ಶಾ ಅನುಮತಿ ನೀಡಿದ್ದರು.
Comments are closed.