ಚೆನ್ನೈ: ತಾನು, ತನ್ನ ಕುಟುಂಬ ಎಂಬ ಪರಿಧಿಯನ್ನಿಟ್ಟುಕೊಂಡು ಸ್ವಾರ್ಥದಲ್ಲಿ ಬದುಕುವ ಜನರ ನಡುವೆ ನಿವೃತ್ತ ಸಹಾಯಕ ಗುಮಾಸ್ತರೊಬ್ಬರು ಶಾಲಾ ಮಕ್ಕಳ ಆಟೋ ಖರ್ಚನ್ನು ಭರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಶಿವಗಂಗೆಯ ಸಿತಾಲೂರು ಪ್ರೌಢ ಶಾಲೆಯಲ್ಲಿ ಗುಮಾಸ್ತರಾಗಿದ್ದ ಮುನಿಯಂಡಿ ಈಗ ನಿವೃತ್ತ ಜೀವನವನ್ನು ಅನುಭವಿಸುತ್ತಿದ್ದಾರೆ. ಕೊವನೂರು ಗ್ರಾಮದಲ್ಲಿ ವಾಸಿಸುತ್ತಿರುವ ಅವರ ಊರಲ್ಲಿ ಶಾಲೆ ಇಲ್ಲ. 3 ಕೀಲೋಮೀಟರ್ ದೂರದಲ್ಲಿರುವ ಸಿತಾಲೂರ್ ಪ್ರೌಢಶಾಲೆಗೆ ಹೋಗಲು ಮಾರ್ಗ ಸರಿಯಾಗಿರಲಿಲ್ಲ. ಹೀಗಾಗಿ 10 ಕೀಲೋಮೀಟರ್ ಸುತ್ತುವರೆದು ಹೋಗಬೇಕಾಗಿತ್ತು.
10ನೇ ತರಗತಿಯಲ್ಲಿ 10 0ಪ್ರತಿಶತ ಉರ್ತೀರ್ಣತೆ ದಾಖಲಿಸುವ ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಮನಸ್ಸಿದ್ದರೂ ಅಷ್ಟು ದೂರ ಕಳುಹಿಸಲು ವಾಹನದ ವೆಚ್ಚ ಭರಿಸಲು ಪೋಷಕರಿಗೆ ಕಷ್ಟವಾಗುತ್ತಿತ್ತು. ಅವರ ಸಮಸ್ಯೆಗೆ ಸ್ಪಂದಿಸಿದ ಮುನಿಯಂಡಿ 2 ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಿ, ಅದರ ವೆಚ್ಚವಾಗಿ ಪ್ರತಿ ತಿಂಗಳು 20,000 ರೂಪಾಯಿ ವ್ಯಯಿಸುವುದಾಗಿ ಭರವಸೆ ನೀಡಿದರು. ಈ ಮೂಲಕ ಬಡ ಪೋಷಕರ ಚಿಂತೆಯನ್ನವರು ಪರಿಹರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪರೋಪಕಾರಿ ಮುನಿಯಂಡಿ, ನನ್ನ ಮಗ ಚೆನ್ನಾಗಿ ದುಡಿಯುತ್ತಿದ್ದಾನೆ. ಹೀಗಾಗಿ ನನ್ನ ನಿವೃತ್ತಿ ವೇತನವನ್ನು ಬಡ ಮಕ್ಕಳಿಗೆ ಮತ್ತು ಶಾಲೆಯ ನವೀಕರಣಕ್ಕಾಗಿ ವ್ಯಯಿಸಲು ನಿರ್ಧರಿಸಿದ್ದೇನೆ. ಇತ್ತೀಚಿಗೆ ಶಾಲೆಯ ದುರಸ್ತಿಗೆ 10,000 ವ್ಯಯಿಸಿದ್ದೇನೆ. ರಸ್ತೆಗಳನ್ನು ಸ್ವಚ್ಛಗೊಳಿಸಿದ್ದೇನೆ, ಎಂದಿದ್ದಾರೆ.
Comments are closed.