ರಾಷ್ಟ್ರೀಯ

ವಿದ್ಯಾರ್ಥಿ ಉತ್ಸವದ ಖರ್ಚು ವೆಚ್ಚ ಕೇಳಿದ್ದಕ್ಕೆ ನಗ್ನಗೊಳಿಸಿ ವಿಡಿಯೋ

Pinterest LinkedIn Tumblr


ಕೋಲ್ಕತ: ಇಲ್ಲಿನ ಸೈಂಟ್‌ ಪಾಲ್ಸ್‌ ಕ್ಯಾಥಡ್ರಲ್‌ ಕಾಲೇಜಿನಲ್ಲಿ ನಡೆಯಲಿಕ್ಕಿರುವ ವಿದ್ಯಾರ್ಥಿ ಉತ್ಸವದ ಖರ್ಚು ವೆಚ್ಚಗಳ ಬಗ್ಗೆ ವಿಚಾರಿಸಿದನೆಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್‌ ಛಾತ್ರ ಪರಿಷತ್‌ (ಟಿಎಂಸಿಪಿ) ಕಾಲೇಜು ಘಟಕದ ಸದಸ್ಯನಾಗಿರುವ ಕಿರಿಯ ವಿದ್ಯಾರ್ಥಿಯನ್ನು ಸಂಘಟನೆಯ ಹಿರಿಯ ಸದಸ್ಯರು ಹಿಂಸಿಸಿ, ಪೂರ್ಣವಾಗಿ ನಗ್ನಗೊಳಿಸಿ, ವಿಡಿಯೋ ಮಾಡಿದ ಅಮಾನುಷ ಘಟನೆ ವರದಿಯಾಗಿದೆ.

ಈ ವಿಡಿಯೋ ಚಿತ್ರಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆದುದನ್ನು ಅನುಸರಿಸಿ ಸಂತ್ರಸ್ತ ವಿದ್ಯಾರ್ಥಿ ನೀಡಿರುವ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಅಮಾನುಷ ಘಟನೆ ನಡೆದಿರುವುದು ನಿಜವೇ ಆಗಿದ್ದಲ್ಲಿ ಆ ಬಗ್ಗೆ ಕಾಲೇಜಿನಿಂದ ಬರುವ ವರದಿಯನ್ನು ಅನುಸರಿಸಿ ತಪ್ಪುಗಾರರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಲದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

ಈ ಘಟನೆ ಕಳೆದ ಮೇ 27ರಂದು ಕಾಲೇಜಿನ ವಿದ್ಯಾರ್ಥಿ ಸಂಘದ ಹಾಲ್‌ನಲ್ಲೇ ನಡೆಯಿತೆಂದು ಹೇಳಲಾಗಿದೆ. ಹಿಂಸೆಗೊಳಗಾಗಿ ನಗ್ನಗೊಳಿಸಲ್ಪಟ್ಟ ವಿದ್ಯಾರ್ಥಿಯು ತನ್ನ ಪೀಡಕರಲ್ಲಿ ತನ್ನನ್ನು ಬಿಡಿರೆಂದು ಗೋಗರೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.

ಟಿಎಂಸಿಪಿ ರಾಜ್ಯ ಅಧ್ಯಕ್ಷೆಯಾಗಿರುವ ಜಯಾ ದತ್ತಾ ಅವರು, ತಾನು ಈ ಘಟನೆಯ ಬಗ್ಗೆ ಕಾಲೇಜು ಅಧಿಕಾರಿಗಳೊಂದಿಗೆ ಮತ್ತು ಉತ್ತರ ಕೋಲ್ಕತ ಟಿಎಂಸಿಪಿ ಸದಸ್ಯರೊಂದಿಗೆ ಮಾತನಾಡಿ ನಿಜ ಸಂಗತಿಯನ್ನು ಅರಿತುಕೊಂಡು ಕ್ರಮತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

Comments are closed.