ರಾಷ್ಟ್ರೀಯ

2019ರ ಲೋಕಸಭೆ ಚುನಾವಣೆ: ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಲ್ಲಿ 40 ಬಿಎಸ್‌ಪಿ-40 ಎಸ್ಪಿ ಸ್ಪರ್ಧೆ!

Pinterest LinkedIn Tumblr


ಲಖನೌ: ಇತ್ತೀಚೆಗೆ ನಡೆದ 14 ಕ್ಷೇತ್ರಗಳ ಉಪ ಚುನಾವಣೆ ಪೈಕಿ ಉತ್ತರ ಪ್ರದೇಶದ ಎರಡು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಸ್‌ಪಿ – ಬಿಎಸ್‌ಪಿಯನ್ನು ಒಳಗೊಂಡ ಮಹಾಮೈತ್ರಿಗೆ ಜಯ ಸಿಕ್ಕಿದೆ. ಆದರೂ ಕೂಡ, ಸಮಾಜವಾದಿ ಪಕ್ಷದ ಗೆಲುವಿನ ಬಗ್ಗೆ ಮೈತ್ರಿಯ ಪಾಲುದಾರ ಪಕ್ಷ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ತುಟಿ ಬಿಚ್ಚಿಲ್ಲ. ಜತೆಗೆ, ಬಿಜೆಪಿಗೆ ಹಿನ್ನೆಡೆಯಾಗಿದ್ದರೂ ಮಾಯಾವತಿ ಸುಮ್ಮನಿರುವುದು ರಾಜಕೀಯ ತಂತ್ರಗಾರಿಕೆ ಎನ್ನಲಾಗ್ತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶಕ್ಕೆ ಇರುವ 80 ಲೋಕಸಭೆ ಕ್ಷೇತ್ರಗಳ ಪೈಕಿ ಕನಿಷ್ಠ 40 ಲೋಕಸಭೆ ಕ್ಷೇತ್ರಗಳ ಮೇಲೆ ಬಿಎಸ್‌ಪಿ ಕಣ್ಣಿಟ್ಟಿದೆ. ಪಕ್ಷದ ಕಾರ್ಯಕರ್ತರ ಎದುರು ಸ್ವತ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಇದನ್ನು ಹೇಳಿದ್ದಾರೆಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳಿಕೊಂಡಿದ್ದಾರೆ. ಅಲ್ಲದೆ, ಬಿಎಸ್‌ಪಿಗೆ ಗೌರವಾನ್ವಿತ ಸ್ಥಾನಗಳನ್ನು ನೀಡದಿದ್ದರೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷ ಸಿದ್ಧವಿದೆ ಎಂದು ಮಾಜಿ ಸಿಎಂ ಮಾಯಾವತಿ ಇತ್ತೀಚೆಗೆ ಹೇಳಿದ್ದರು.

ಆದರೆ, ಸಮಾಜವಾದಿ ಪಕ್ಷ ಮಾತ್ರ ಗೋರಖ್‌ಪುರ, ಫುಲ್‌ಪುರ ಲೋಕಸಭೆ ಕ್ಷೇತ್ರ ಹಾಗೂ ನೂರ್‌ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿ ಸಹಾಯದಿಂದ ಗೆದ್ದಿದ್ದರೂ, ಮಿತ್ರ ಪಕ್ಷಕ್ಕೆ ಎಷ್ಟು ಸ್ಥಾನಗಳನ್ನು ನೀಡಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ಈ ಬಗ್ಗೆ ಸೂಚ್ಯವಾಗಿ ಹೇಳಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ನಮ್ಮ ಪಕ್ಷ ಇತರರಿಗೆ ಗೌರವ ಕುಡುವುದಕ್ಕೆ ಹೆಸರುವಾಸಿ. ಅಲ್ಲದೆ, ಯಾರು ಗೌರವ ಕೊಡುವುದಿಲ್ಲ ಎಂಬುದು ನಿಮಗೆ ಗೊತ್ತು ಎಂದು ಹೇಳಿದ್ದಾರೆ.

ಇನ್ನು, 2014ರ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಹಾಗೂ ಎರಡನೇ ಸ್ಥಾನಗಳನ್ನು ಪಡೆದುಕೊಂಡ ಪಕ್ಷಗಳು ಆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂದು ಎರಡೂ ಪಕ್ಷಗಳು ಈ ಹಿಂದೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದವು. ಈ ಪೈಕಿ, ಬಿಎಸ್‌ಪಿಗೆ 34 ಹಾಗೂ ಎಸ್‌ಪಿಗೆ 31 ಕ್ಷೇತ್ರಗಳು ದೊರೆಯುವ ಸಾಧ್ಯತೆ ಇದೆ. ಅಲ್ಲದೆ, ಕೈರಾನಾ ಲೋಕಸಭೆ ಕ್ಷೇತ್ರದಲ್ಲಿ ಮಹಾಮೈತ್ರಿಕೂಟಕ್ಕೆ ಗೆಲುವು ಸಿಕ್ಕಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಆರ್‌ಎಲ್‌ಡಿಗೂ ಹಲವು ಸ್ಥಾನಗಳನ್ನು ನೀಡಬೇಕಿದೆ.

ಜತೆಗೆ, ದಲಿತ ಸಂಘಟನೆಗಳು ಹೆಚ್ಚಾಗಿ ಬಿಎಸ್‌ಪಿಯನ್ನು ಬೆಂಬಲಿಸುವುದರಿಂದ ಹೆಚ್ಚು ಮತಗಳನ್ನು ಮಹಾಮೈತ್ರಿಕೂಟಕ್ಕೆ ಮಾಯಾವತಿ ನೇತೃತ್ವದ ಪಕ್ಷ ತಂದುಕೊಡಬಹುದು. ಹಾಗೆ, 2014ರಲ್ಲಿ ಬಿಎಸ್‌ಪಿಗೆ ಬಂದಿರುವ ಶೇಕಡಾವಾರು ಮತಗಳು ಹಾಗೂ ಹಲವು ಕ್ಷೇತ್ರಗಳಲ್ಲಿ ಎರಡನೇ ಸ್ಥಾನಗಳನ್ನು ಪಡೆದಿದೆ. ಅಲ್ಲದೆ, ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 5 ಸಾವಿರ ದಲಿತರ ಮತಗಳನ್ನು ತಮ್ಮ ಪಕ್ಷ ನಿರಾಯಾಸವಾಗಿ ಪಡೆದುಕೊಳ್ಳಲಿದೆ ಹಾಗೂ ಮಿತ್ರಕೂಟದ ಪಕ್ಷಗಳಿಗೆ ತಂದುಕೊಡಲಿದೆ. ಹೀಗಾಗಿ, ಬಿಎಸ್‌ಪಿಗೆ ಹೆಚ್ಚು ಸ್ಥಾನಗಳನ್ನು ಕೇಳುವ ಹಕ್ಕಿದೆ ಎಂದು ಆ ಪಕ್ಷ ಹೇಳಿಕೊಂಡಿದೆ. ಇನ್ನೊಂದೆಡೆ, ಉತ್ತರ ಪ್ರದೇಶದಲ್ಲಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುವ ಸಾಧ್ಯತೆಯಿದೆ. ಅಲ್ಲದೆ, ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಬಿಎಸ್‌ಪಿ ಹಾಗೂ ಕಾಂಗ್ರೆಸ್ ಮೈತ್ರಿಗೆ ಮುಂದಾಗಿದ್ದು, 230 ಕ್ಷೇತ್ರಗಳ ಪೈಕಿ ಮಾಯಾವತಿ ನೇತೃತ್ವದ ಪಕ್ಷ 40 ರಿಂದ 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಎದುರು ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ.

Comments are closed.