ರಾಷ್ಟ್ರೀಯ

ಬಂಗಾರವನ್ನು ಕಳ್ಳಸಾಗಣೆ ಮಾಡಿ, ಸಿಕ್ಕಿಬಿದ್ದರೆ ಜಾಮೀನು ಸಿಗುತ್ತದೆ: ದೇವದಾಸಿ ಸಮುದಾಯಕ್ಕೆ ಶಾಸಕನ ಸಲಹೆ

Pinterest LinkedIn Tumblr


ಜೋಧ್‌ಪುರ : “ಮಾದಕ ದ್ರವ್ಯ ಕಳ್ಳಸಾಗಣೆ ಮಾಡಬೇಡಿ; ಸಿಕ್ಕಿ ಬಿದ್ದರೆ ನಿಮಗೆ ಬೇಲ್‌ ಸಿಗಲ್ಲ; ಆದರೆ ಚಿನ್ನ ಕಳ್ಳಸಾಗಣೆ ಮಾಡಿ; ಸಿಕ್ಕಿಬಿದ್ದರೆ ಸುಲಭದಲ್ಲಿ ಬೇಲ್‌ ಸಿಗುತ್ತೆ”.

ಇಂತಹ ಒಂದು ವಿವಾದಾತ್ಮಕ ಮತ್ತು ವಿವೇಚನಾರಹಿತ ಸಲಹೆಯನ್ನು ನೀಡಿದವರು ರಾಜಸ್ಥಾನದ ಬಿಲಾರಾ ಶಾಸಕ ಅರ್ಜುಲ್‌ ಲಾಲ್‌ ಗರ್ಗ್‌. ಅವರು ದೇವಾಸಿ ಸಮುದಾಯದವರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಪುಂಖಾನುಪುಂಖವಾಗಿ ಅವರಿಂದ ಈ ಸಲಹೆ ಪುಕ್ಕಟೆಯಾಗಿ ಬಂತು. ಅಂತೆಯೇ ಅದೀಗ ವೈರಲ್‌ ಆಗಿದೆ.

“ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಪಿಡುಗಿನ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಈ ಅಪರಾಧಕ್ಕಾಗಿ ಎಷ್ಟು ಮಂದಿಯನ್ನು ಜೋಧ್‌ಪುರ ಜೈಲಿನಲ್ಲಿ ಇಡಲಾಗಿದೆ ಎಂದು ಪ್ರಶ್ನಿಸಿದ್ದೇನೆ. ಆಗಲೇ ನನಗೆ ಗೊತ್ತಾಯಿತು : ಅತ್ಯಧಿಕ ಸಂಖ್ಯೆಯಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಜೈಲಿಗೆ ಹೋಗಿರುವವರು ದೇವದಾಸಿ ಸಮುದಾಯದವರು ಮತ್ತು ಇವರು ಈ ವಿಷಯದಲ್ಲಿ ಬಿಷ್‌ಣೋಯಿ ಸಮುದಾಯದವರನ್ನು ಹಿಂದಿಕ್ಕಿದ್ದಾರೆ ಎಂದು ತಿಳಿಯಿತು’ ಎಂಬುದಾಗಿ ಗರ್ಗ್‌ ಹೇಳಿದರು.

“ಒಂದೊಮ್ಮೆ ನಿಮಗೆ ನಂಬರ್‌ 2 ಬ್ಯುಸಿನೆಸ್‌ ಮಾಡಬೇಕು ಅಂತ ಅನ್ನಿಸಿದರೆ ನೀವು ಮಾದಕ ದ್ರವ್ಯ ಕಳ್ಳಸಾಗಣೆ ಬದಲು ಚಿನ್ನ ಕಳ್ಳಸಾಗಣೆಯ ಬ್ಯುಸಿನೆಸ್‌ ಮಾಡಿ; ಏಕೆಂದರೆ ಅವೆರಡರ ಬೆಲೆಯೂ ಒಂದೇ ತೆರನಾಗಿದೆ; ನೀವು ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ ಜೈಲಿಗೆ ಹೋಗುತ್ತೀರಿ; ನಿಮಗೆ ಬೇಲ್‌ ಸಿಗಲ್ಲ; ಅದೇ ನೀವು ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ ನಿಮಗೆ ಬೇಲ್‌ ಸಿಗುತ್ತೆ; ಜೈಲು ಪಾಲಾಗುವ ಭಯ ಇರುವುದಿಲ್ಲ’ ಎಂದು ಗರ್ಗ್‌ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಬಯಾರಾ ದ ಜೈತವಾಸ್‌ ಗ್ರಾಮದಲ್ಲಿ ದೇವಾಲಯ ಸಮರ್ಪಣೆ ಕಾರ್ಯಕ್ರಮದಲ್ಲಿ ಗರ್ಗ್‌ ಅವರು ಮಾತನಾಡುತ್ತಿದ್ದರು. ಈ ಸಮಾರಂಭದಲ್ಲಿ ಅನೇಕ ಸಾಧು ಸಂತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲರ ಮುಂದೆ ಗರ್ಗ್‌ ಅವರಿಂದ ಈ ಮಾತುಗಳು ಬಂದವು ಎನ್ನುವುದು ಮುಖ್ಯ.

ಸಮಾರಂಭದ ಬಳಿಕ ಖಾಸಗಿ ಪ್ರವಾಸಾರ್ಥವಾಗಿ ಗರ್ಗ್‌ ಅವರು ಲಡ್ಡಾಕ್‌ ಗೆ ತೆರಳಿದ ಕಾರಣ ಅವರನ್ನು “ಚಿನ್ನ ಕಳ್ಳಸಾಗಣೆ’ ಕುರಿತ ವಿವಾದಾತ್ಮಕ ಹೇಳಿಕೆಗಾಗಿ ಸ್ಪಷ್ಟೀಕರಣ ಪಡೆಯಲು ಮಾಧ್ಯಮದವರಿಗೆ ಸಾಧ್ಯವಾಗಲಿಲ್ಲ.

Comments are closed.